ಪಿ.ಜಿ.ಜಗನ್ನಿವಾಸ ರಾವ್‌ಗೆ ಶೋಕಾಸ್ ನೋಟಿಸ್

Published on

ಸಹಪಾಠಿ ಯುವತಿಗೆ ವಿವಾಹದ ಭರವಸೆ ನೀಡಿ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾದ ಬಿಜೆಪಿ ಪಕ್ಷ ನಗರ ಮಂಡಲ ಮಾಜಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ, ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಹಿಂದು ಯುವತಿಗೆ ವಂಚಿಸಿದ ವಿಚಾರ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ರಾಜ್ಯಮಟ್ಟದಲ್ಲಿ ತೀವ್ರ ಮುಜುಗರವನ್ನುಂಟು ಮಾಡಿತ್ತು. ಜುಲೈ ೩ರಂದು ಪುತ್ತೂರಿಗೆ ಭೇಟಿ ನೀಡಿದ್ದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತೂರು ಬಿಜೆಪಿ ಘಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೆನ್ನಲಾಗಿದೆ.

ಜಿಲ್ಲಾಧ್ಯಕ್ಷರ ಸೂಚನೆಯಂತೆ, ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಅವರು ಪಿ.ಜಿ.ಜಗನ್ನಿವಾಸ ರಾವ್ ಅವರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಖಚಿತಪಡಿಸಿದ್ದಾರೆ. ‘ಪುತ್ರನ ಪ್ರಕರಣವು ಪಕ್ಷಕ್ಕೆ ಮುಜುಗರ ತಂದಿದೆ. ಈ ಕುರಿತು ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕೆ ಸೂಕ್ತ ಕಾರಣ ನೀಡುವಂತೆ ನೋಟಿಸ್‌ನಲ್ಲಿ ಕೋರಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅದಾಗ್ಯೂ, ಜಗನ್ನಿವಾಸ ರಾವ್ ನೋಟಿಸ್‌ಗೆ ಉತ್ತರಿಸಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯು ಪುತ್ತೂರು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ದೇವಸ್ಥಾನದಲ್ಲಿ ರುದ್ರ ಪಠಣ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ನಡೆಯುವ ರುದ್ರ ಪಠಣ ಕಾರ್ಯಕ್ರಮದಲ್ಲಿ ಯುವಕನ ತಂದೆ ಪಿ.ಜಿ.ಜಗನ್ನಿವಾಸ ರಾವ್ ಜಾಮೀನು ಸಿಗುತ್ತಿದ್ದಂತೆ ಭಾಗವಹಿಸುತ್ತಿದ್ದಾರೆ. ಯುವತಿ ಜೂನ್ ೨೭ರಂದು ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹತ್ತು ರಾತ್ರಿ ಕಳೆಯುವ ಮೊದಲೇ ದೇವಸ್ಥಾನಕ್ಕೆ ತೆರಳುವ ಮೂಲಕ ದೇವಾಲಯದ ಅಶೌಚಕ್ಕೆ ಕಾರಣವಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ಬ್ರಾಹ್ಮಣ ಸಮಾಜದವರು ಏನು ಮಾಡಿದರೂ ನಡೆಯುತ್ತದೆ ಎಂಬ ರೀತಿಯಲ್ಲಿ ಸಮಾಜಿಕ ಜಾಲದಲ್ಲಿ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net