ಮನೆ ಮಂಜೂರು ಮಾಡದ ಬಿಜೆಪಿ: ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ

22
Published on

ಮೈಸೂರು: ಕಾಂಗ್ರೆಸ್ ಅವಧಿಯಲ್ಲಿ ಮನೆ ಮಂಜೂರು ಮಾಡಿದ್ದ ಪಟ್ಟಿಯನ್ನು ಕಂಪ್ಯೂಟರ್‌ನಲ್ಲಿ ಲಾಕ್ ಮಾಡಿದ ಬಿಜೆಪಿ, ಐದು ವರ್ಷದಲ್ಲಿ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ ಎಂದು ವರುಣ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ವರುಣಾ ಕ್ಷೇತ್ರದ ಸರಗೂರು, ನಗರ್ಲೆ, ಬಸವನಪುರ, ಕಬ್ಬಲಗೆರೆಹುಂಡಿ, ಹನಿಯಂಬಳ್ಳಿ, ಗೋಣಹಳ್ಳಿ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕ್ಷೇತ್ರದ ಎಲ್ಲ್ಲ ಗ್ರಾಮಗಳಲ್ಲಿಯೂ ಜನರು, ‘ನಮ್ಮಲ್ಲಿ ನಿವೇಶನವಿದೆ. ಮನೆ ಮಂಜೂರು ಮಾಡಿಕೊಡಿ’ ಎನ್ನುವ ಬೇಡಿಕೆ ಇಡುತ್ತಿದ್ದಾರೆ. 2013 ರಿಂದ 2018ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ಮನೆಗಳನ್ನು ಮಂಜೂರು ಮಾಡಿತ್ತು. ಆದರೆ ಮಂಜೂರು ಮಾಡಿದ್ದ ಮನೆಗಳ ಪಟ್ಟಿಯನ್ನು ಬಿಜೆಪಿ ಸರ್ಕಾರ ಕಂಪ್ಯೂಟರ್‌ನಲ್ಲಿ ಲಾಕ್ ಮಾಡಿ ತನ್ನ ಅವಧಿಯಲ್ಲಿ ಒಂದು ಮನೆಯನ್ನೂ ಕೊಟ್ಟಿಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರ ಕಳೆದ 5 ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಇವರೆಲ್ಲ ಬಡವರ ವಿರೋಧಿಗಳು. ಸಿದ್ದರಾಮಯ್ಯ ನೇತೃತ್ವದಲ್ಲಿ ಈಗ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದು, ಮನೆಗಳನ್ನು ಮಂಜೂರು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಮನವಿ ಸಲ್ಲಿಕೆ: ಸರಗೂರಿನಲ್ಲಿ ಸಾರ್ವಜನಿಕರು ನಾನಾ ಮನವಿ ಸಲ್ಲಿಸಿದರು. ಕುರಿಸಾಲ ಕೊಡಿಸಿ, ದಾರಿ ದುರಸ್ತಿ ಮಾಡಿಸಿ, ನಿವೇಶನ ಕೊಡಿಸಿ, ಸ್ಮಶಾನ ಬೇಕು, ಕೊಟ್ಟಿಗೆ ಲೋನ್ ಕೊಡಿಸಿ, ಹಸು ಕೊಡಿಸಿ, ಕೆಲಸ ಕೊಡಿಸಿ, ಗೃಹಲಕ್ಷ್ಮಿ ಹಣ ಬಂದಿಲ್ಲ ಎಂಬುದು ಸೇರಿದಂತೆ ಹಲವು ಮನವಿಗಳ ಸುರಿಮಳೆಗೈದರು. ಇದಕ್ಕುತ್ತರಿಸಿದ ಡಾ. ಯತೀಂದ್ರ, ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷೆ ಸಂಧ್ಯಾರಾಣಿ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ತಾ.ಪಂ. ಇಒ ರಾಜೇಶ್ ಜೆರಾಲ್ಡ್, ಡಿವೈಎಸ್‌ಪಿ ಗೋವಿಂದರಾಜು, ಎಸ್‌ಐ ಸುನಿಲ್, ಮುಖಂಡರಾದ ರಂಗಸ್ವಾಮಿ, ಪ್ರಮೋದ್ ಕುಮಾರ್, ಮನು ನರಸಿಂಹಮೂರ್ತಿ, ಅಲ್ತಾಫ್ ಪಾಷಾ, ಉಬೇದುಲ್ಲಾ ಖಾನ್, ನಂದೀಶ್, ಶಿವಕುಮಾರ್, ನಾರಾಯಣ, ಗುರುಪಾದ ಸ್ವಾಮಿ, ಇಸ್ಮಾಯಿಲ್ ಮೂಗಶೆಟ್ಟಿ, ಸಿಡಿಪಿಒ ಮಂಜುಳಾ, ಪಿಡಿಒ ಈಶಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net