ಜಿಲ್ಲಾಧ್ಯಕ್ಷರಾಗಿ ಇಂದ್ರೇಶ್ ಅಧಿಕಾರ ಸ್ವೀಕಾರ: ಜವಾಬ್ದಾರಿ ಹಸ್ತಾಂತರಿಸಿದ ಸಿ.ಪಿ.ಉಮೇಶ್

BJP new district president takes charge mandya
Published on

ಮಂಡ್ಯ: ಜಿಲ್ಲಾ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ಎನ್.ಎಸ್.ಇಂದ್ರೇಶ್ ಅಧಿಕಾರ ಸ್ವೀಕರಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಪಕ್ಷದ ಜವಾಬ್ದಾರಿ. ಒಳ್ಳೆಯ ಕೆಲಸ ಮಾಡಿ ಪಕ್ಷವನ್ನು ಕಟ್ಟುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವರಿಷ್ಠರು ಹೇಳಿದ್ದಾರೆ. ಕಟ್ಟಕಡೆಯ ಕಾಯಕರ್ತರಿಗೂ ಧಕ್ಕೆ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರ, ಪ್ರೀತಿ ಇರಲಿ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಘಟಕದಲ್ಲಿ ಯಾವುದೇ ಬಣ, ಗುಂಪುಗಾರಿಕೆಗೆ ಅವಕಾಶ ಕೊಡದೆ ಪ್ರತಿಯೊಬ್ಬರ ವಿಶ್ವಾಸ ಗಳಿಸಿ ಪಕ್ಷವನ್ನು ಕಟ್ಟುತ್ತೇನೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ನನ್ನನ್ನು ಗುರುತಿಸಿದ್ದಾರೆಂದರೆ ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಕಾರಣ. ಈ ಮೊದಲು ಅವರನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದರು. ಸರ್ಕಾರದ ಕಾರನ್ನು ಉಪಯೋಗಿಸದೆ, ಭ್ರಷ್ಟಾಚಾರ ಮಾಡದೆ ಮಾದರಿ ಆಡಳಿತ ನೀಡಿದರು. ಅದನ್ನು ಗಮನಿಸಿ ಸಹಕಾರ ಭಾರತಿ ಅಧ್ಯಕ್ಷನ್ನಾಗಿ ಮಾಡಿದರು. ಅಲ್ಲಿಯೂ ಇತಿಹಾಸದಲ್ಲೇ ಹೆಚ್ಚು ಸದಸ್ಯತ್ವ ಮಾಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದರ ನಂತರ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಯಿತು. ಆದ್ದರಿಂದ ಅವರು ಹ್ಯಾಟ್ರಿಕ್ ಅಧ್ಯಕ್ಷರು. ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಮತಗಳಿಗೆ ಸಂಖ್ಯೆ ಹೆಚ್ಚಾಗುವಲ್ಲಿಯೂ ಉಮೇಶ್ ಪಾತ್ರ ಮಹತ್ವದ್ದಾಗಿದೆ. ಮುಂದೆ ಅವರಿಗೆ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನವನ್ನು ವರಿಷ್ಠರು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಬೇಕೆಂಬ ನಿಟ್ಟಿನಲ್ಲಿ ಪಕ್ಷ ಗುರುತಿಸುವ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ನಾನು ಅಧಿಕಾರ ವಹಿಸಿಕೊಂಡಾಗ ಬಣ ರಾಜಕಾರಣ ಹೆಚ್ಚಾಗಿತ್ತು. ಈ ಸಮಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಕಾರ್ಯಕರ್ತರು ತಮ್ಮಲ್ಲಿನ ಗೊಂದಲ ಬಿಟ್ಟು ಪಕ್ಷದ ಕಾರ್ಯಕರ್ತರಾಗಿ ದುಡಿಯಬೇಕು. ಪಕ್ಷ ಪ್ರತಿಯೊಬ್ಬರನ್ನೂ ಗುರುತಿಸಿ ಜವಾಬ್ದಾರಿ ನೀಡಲಿದೆ. ನಾನು ಜಿಲ್ಲೆಯ ರಾಜಕಾರಣಕ್ಕೆ ಬರಲು ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಕಾರಣ. ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಅವರೆಲ್ಲರ ಕೊಡುಗೆ ಇದೆ. ನಂತರ ಪಕ್ಷದ ಜಿಲ್ಲಾ ಧ್ಯಕ್ಷರನ್ನಾಗಿ ಮಾಡಿದರು. ಇದಕ್ಕೆ ನಿರ್ಮಲ್‌ಕುಮಾರ್ ಸುರಾನ ಸಹಕಾರ ಹೆಚ್ಚಿದೆ. ಅಲ್ಲದೆ, ರಾಜ್ಯಾಧ್ಯಕ್ಷರು ಹೆಚ್ಚು ಪ್ರೋತ್ಸಾಹ ನೀಡಿದರು ಎಂದು ಸ್ಮರಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಕೆ.ಆರ್.ಪೇಟೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net