ಮಾಜಿ ಸಿಎಂ ಎಚ್‌ಡಿಕೆಗೆ ಕಾಮಾಲೆ ಕಣ್ಣು: ಕಟೀಲ್ ಲೇವಡಿ

6 smg nalinkumar Kateel
Published on

ಶಿವಮೊಗ್ಗ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಮಾಲೆ ಕಣ್ಣು. ಅವರು ಅಧಿಕಾರದಲ್ಲಿದ್ದಾಗ ಕುಟುಂಬ ರಾಜಕಾರಣ ಮಾಡಿದರು. ಕುಟುಂಬಸ್ಥರಿಗೆ ಸರ್ಕಾರಿ ಸೌಲಭ್ಯ ಕೊಟ್ಟವರು. ಅವರಿಗೆ ರಾಷ್ಟ್ರದ ಪರಿಕಲ್ಪನೆ, ಚಿಂತನೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕುಟುಕಿದರು.

ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನೇ ಕುಟುಂಬ ರಾಜಕಾರಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಆರ್‌ಎಸ್‌ಎಸ್ ವಿಚಾರಧಾರೆಗಳು ತಿಳಿದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಂಘ ಪರಿವಾರ ಸಂಸ್ಕಾರ, ದೇಶಭಕ್ತಿಯ ಚಿಂತನೆಗಳನ್ನು ಪ್ರತಿಯೊಬ್ಬರಿಗೂ ಕೊಡುತ್ತಿದೆ. ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಶಾಖೆಗೆ ಬರುವುದು ಒಳ್ಳೆಯದು. ಯಾವುದೇ ವಿಷಯದ ಟೀಕೆ ಮಾಡುವುದಕ್ಕೂ ಮುನ್ನ ಅದರ ಒಳಹೊಕ್ಕು ಅಧ್ಯಯನ ಮಾಡಬೇಕು. ಹಾಗಾಗಿ ಅವರು ನಮ್ಮ ಶಾಖೆಗೆ ಬಂದು ಒಂದು ವಾರ ಅಧ್ಯಯನ ಮಾಡಿ ನಂತರ ಟೀಕಿಸಲಿ ಎಂದು ಸವಾಲೆಸೆದರು.

ಸಂಘವು ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದು ಸಾವಿರಾರು ವಿದ್ಯಾಸಂಸ್ಥೆಗಳನ್ನು ಹೊಂದಿದೆ. ವಿದ್ಯಾಭಾರತಿ ರಾಷ್ಟ್ರೀಯತೆಯ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಸಂಘದ ಮೂಲಕ ರಾಷ್ಟ್ರಭಕ್ತರ ನಿರ್ಮಾಣ ಮಾಡಲಾಗುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲೂ ಬಹಳಷ್ಟು ಸ್ವಯಂಸೇವಕರಿದ್ದಾರೆ. ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕೂಡ ಆರ್‌ಎಸ್‌ಎಸ್ ಮೂಲದವರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net