

ಹೊಸಪೇಟೆ: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ ಹೆಚ್ಚಾಗಿದ್ದು ಕಾಂಗ್ರೆಸ್ ಆಡಳಿತ ಕೊನೆಗೊಳಿಸಬೇಕು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ಭಾಗಿಯಾಗಿದ್ದು, ರಾಜೀನಾಮೆ ನೀಡಬೇಕು. ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ವಹಿವಾಟಿನ ಲೆಕ್ಕ ನೀಡಲಾಗದೆ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ನಿಷ್ಪಕ್ಷಪಾತ ತನಿಖೆ ಮೂಲಕ ಅವ್ಯವಹಾರವನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತರಾದ ಅಡವಿಸ್ವಾಮಿ, ಸಚಿನ್ ಕುಮಾರ, ಜಗದೀಶ ಕಾಮಟಗಿ, ದ್ವಾರಕೀಶ್, ಸೂರಿ ಬಂಗಾರ, ಚನ್ನವೀರ ಬದ್ರಿಕಟ್ಟಿ, ಶ್ರೀಕಾಂತ್ ಪೂಜಾರ ಇತರರಿದ್ದರು.