ಬಿಜೆಪಿ ಸಂಸದನ ರಕ್ಷಣೆ ನಾಚಿಕೆಗೇಡು

SND KUSTI
ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಸಂಸದ ಬ್ರಿಜ್ ಭೂಷಣ್ ಶರಣ್‌ಸಿಂಗ್‌ನನ್ನು ಬಂಧಿಸಬೇಕು ಎಂಂದು ಒತ್ತಾಯಿಸಿ ಸಿಂಧನೂರಿನ ತಹಸಿಲ್ ಕಚೇರಿ ಮುಂದೆ ಸಂಯುಕ್ತ ಕಿಸಾನ್ ಮೋರ್ಚಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಶಕುಂತಲಾ ಪಾಟೀಲ್, ಪ್ರಮುಖರಾದ ಡಿ.ಎಚ್.ಕಂಬಳಿ, ಡಿ.ಎಚ್.ಪೂಜಾರ್, ಚಂದ್ರಶೇಖರ ಗೊರಬಾಳ, ಅಮೀನ್ ಪಾಷಾ ದಿದ್ದಿಗಿ, ಹುಸೇನ್‌ಸಾಬ್, ನಾಗರಾಜ ಪೂಜಾರ್, ಸಮ್ಮದ್ ಚೌದ್ರಿ ಇದ್ದರು.
Published on

ಸಿಂಧನೂರು: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಸಂಸದ ಬ್ರಿಜ್ ಭೂಷಣ್ ಶರಣ್‌ಸಿಂಗ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದಿಂದ ನಗರದ ಗಾಂಧಿ ವೃತ್ತ ಮತ್ತು ತಹಸಿಲ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ. ಭಾರತ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಇತರ ಸಿಬ್ಬಂದಿ, ಪ್ರಖ್ಯಾತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಕೇಂದ್ರ ಸರ್ಕಾರ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದಬ್ಬಾಳಿಕೆ ನಡೆಸುವುದು ಸರಿಯಲ್ಲ

ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಪದಕ ಗೆದ್ದು ಬಂದಾಗ ಮಹಿಳಾ ಕ್ರೀಡಾಪಟುಗಳೊಂದಿಗೆ ಸೆಲ್ಫಿ ತೆಗೆಸಿಕೊಂಡು ಬೀಗಿದ್ದ ಪ್ರಧಾನಿ ನರೇಂದ್ರ ಮೋದಿ, ದೌರ್ಜನ್ಯಕ್ಕೊಳಗಾಗಿ ನ್ಯಾಯ ಕೇಳಲು ಹೋರಾಟಕ್ಕೆ ಮುಂದಾದ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಗೆ ಕುಮ್ಮಕ್ಕು ನೀಡಿ ಹಾಡಹಗಲೇ ದಬ್ಬಾಳಿಕೆ ನಡೆಸುವುದು ಸರಿಯಲ್ಲ.

ಆರೋಪಿ ಬ್ರಿಜ್ ಭೂಷಣ್ ಶರಣ್‌ಸಿಂಗ್‌ನನ್ನು ಬಿಜೆಪಿಯಿಂದ ವಜಾಗೊಳಿಸಬೇಕು. ಪೊಕ್ಸೋ ಪ್ರಕರಣ ದಾಖಲಾಗಿರುವುದರಿಂದ ಈ ಕೂಡಲೇ ಪೊಲೀಸರು ಬ್ರಿಜ್ ಭೂಷಣ್ ಸಿಂಗ್‌ನನ್ನು ಬಂಧಿಸಬೇಕು. ದೇಶಾದ್ಯಂತ ದಿನೇ ದಿನೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಎಸ್.ದೇವೇಂದ್ರಗೌಡ, ಬಸವಂತರಾಯಗೌಡ ಕಲ್ಲೂರು, ಹಾಜಿಸಾಬ್, ಬಸವರಾಜ ಬಾದರ್ಲಿ, ಶಂಕರ್ ವಾಲಿಕಾರ, ಬಸವರಾಜ ಬೆಳಗುರ್ಕಿ, ಬಸವರಾಜ ಹಸಮಕಲ್, ನಾರಾಯಣ ಬೆಳಗುರ್ಕಿ, ಪ್ರಗತಿ, ಚಾಂದ್ ಪಾಷಾ, ಸಾಮಾಜಿಕ ಕಾರ್ಯಕರ್ತೆ ವಿರುಪಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net