ಬಿಜೆಪಿಗೆ ಸಂಗಣ್ಣ ವಿದಾಯ,13 ವರ್ಷಗಳ ಪಯಣ ಮುಕ್ತಾಯ

bjp mp sanganna karadi resign congresss opens door for sanganna
Published on

ಕೊಪ್ಪಳ: ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಸಂಸದ ಸ್ಥಾನ ಹಾಗೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿಯೊಂದಿಗಿನ ತಮ್ಮ 13 ವರ್ಷದ ನಂಟು ಮುರಿದುಕೊಂಡು ಕೈ ಹಿಡಿಯಲು ಸಜ್ಜಾಗಿದ್ದಾರೆ.

ರಾಜೀನಾಮೆ ಬೆನ್ನಲ್ಲೇ ಕ್ಷೇತ್ರದ ಜನತೆಗೆ ಪ್ರಕಟಣೆ ಮೂಲಕ ಸಂದೇಶ ರವಾನಿಸಿದ್ದು, ತಮ್ಮ ಬೇಸರ ಹೊರಹಾಕಿದ್ದಾರೆ. 10 ವರ್ಷ ಸಂಸದನಾಗಿ ಕೆಲಸ ಮಾಡಿರುವೆ. ನಾನು ಎಂಪಿ ಆಗುವ ಮೊದಲು ರೈಲ್ವೆ, ಹೆದ್ದಾರಿ ಹಾಗೂ ಕೇಂದ್ರ ಸರ್ಕಾರ ಯೋಜನೆಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು, ಭೇಟಿಯಾಗಿ ಹಲವು ಕಾಮಗಾರಿ ತಂದ ಹೆಮ್ಮೆ ಇದೆ. ಇತ್ತೀಚಿನ ರಾಜಕಾರಣ ನನಗೆ ಬೇಸರ ತರಿಸಿದೆ.

ನನ್ನ ಸೇವೆ ಗುರುತಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಕೊಪ್ಪಳದಲ್ಲಿ ಬಿಜೆಪಿ ನೆಲೆಯೂರಲೂ ನಾನೂ ಒಬ್ಬ ಕಾರಣಿಕರ್ತ. ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಎಲ್ಲ ಕಾರ್ಯಕ್ರಮ ಯಶಸ್ವಿಗೊಳಿಸಿ ಸಂಟಿಸಿರುವೆ. ನನ್ನ ಜತೆಗಿದ್ದೇ ಬೆನ್ನಿಗೆ ಚೂರಿ ಹಾಕಿದ ಮಹಾ ನಾಯಕರಿಗೆ ಕೊಪ್ಪಳದ ಜನ ತಕ್ಕ ಶಾಸ್ತಿ ಮಾಡುತ್ತಾರೆಂದು ಪ್ರಕಟಣೆ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ರಾಜಕೀಯವಾಗಿ ಮುಖಂಡರನ್ನು ಬೆಳೆಸಲು ಯತ್ನಿಸಿದನೆ ವಿನಾ ಮಟ್ಟ ಹಾಕುವ ಯೋಚನೆ ಮಾಡಲಿಲ್ಲ. ಆದರೆ, ನನ್ನನ್ನು ಮಟ್ಟ ಹಾಕಲು ಪ್ರಯತ್ನಗಳು ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುವ ಸಮಯವನ್ನು ಕ್ಷೇತ್ರದ ಜನತೆಗೆ ಮೀಸಲಿಟ್ಟಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ. ಅವರ ಸೋಲಿಗೆ ನಾನೇ ಹೊಣೆ ಎಂದು ಹಗೆ ಸಾಧಿಸಿ ಟಿಕೆಟ್​ ತಪ್ಪಿಸಿದ್ದಾರೆ. ಅವರ ಕಾರ್ಯವೈಖರಿ, ಮುಖಂಡರ ಹಾಗೂ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವುದನ್ನು ನನ್ನ ಮೇಲೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ನನಗೆ ಟಿಕೆಟ್​ ತಪ್ಪಿಸಿದ ಮಹಾನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್​ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಅವರಿಗೂ ನನ್ನ ಪರಿಸ್ಥಿತಿ ನಿಮಾರ್ಣವಾಗಲಿದೆ. ಬಿಜೆಪಿ ನನ್ನ ಕೈ ಬಿಟ್ಟರೂ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆ ನನ್ನ ಜತೆಗಿದ್ದಾರೆ. ನನ್ನ ಕೊನೆ ಉಸಿರಿರುವವರೆಗೂ ಜನಸೇವೆ ಮಾಡುತ್ತೇನೆ. ಸಂಗಣ್ಣ ಕರಡಿ. ಕೊಪ್ಪಳ ಸಂಸದ.

ಸಂಗಣ್ಣ ಕರಡಿ. ಕೊಪ್ಪಳ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net