ಬಿಜೆಪಿ ಸಂಸದನಿಂದ ದಲಿತ ಸಿಎಂ ಕೂಗು ! ಯಾರದು? ಏನದು ಬೇಡಿಕೆ?

ramesh jigajinagi
Published on

ವಿಜಯಪುರ: ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆ ಕುರಿತ ಚರ್ಚೆ ಹೊತ್ತಿ ಉರಿಯುತ್ತಿರುವಾಗಲೇ ಬಿಜೆಪಿ ಸಂಸದರೊಬ್ಬರು ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ !

ಸಂಸದ ರಮೇಶ ಜಿಗಜಿಣಗಿ ಅವರು ಇಂಥದ್ದೊಂದು ಧ್ವನಿ ಮೊಳಗಿಸಿದ್ದು, ‘ಪಕ್ಷ ಯಾವುದೇ ಆಗಿರಲಿ ದಲಿತ ಸಿಎಂ ನನ್ನ ಕನಸು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರು ಮುಖ್ಯಮಂತ್ರಿಯಾಗಿಲ್ಲ, ದಲಿತರೇನು ಕೇವಲ ಕಸ ಹೊಡೆಯುತ್ತಲೇ ಇರಬೇಕಾ? ಎಂದು ಪ್ರಶ್ನಿಸಿರುವ ಅವರು, ದಲಿತರು ಎಂದೋ ಮುಖ್ಯಮಂತ್ರಿಯಾಗಬೇಕಿತ್ತು, ಅನೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ದಲಿತರು ಅಲಂಕರಿಸಿದ್ದಾರೆ, ನಮ್ಮ ರಾಜ್ಯದಲ್ಲಿ ಇನ್ನೂ ಆಗಿಲ್ಲ, ಈ ಕಾಂಗ್ರೆಸ್‌ನವರಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಏನು ಧಾಡಿ ಎಂದು ಖಾರವಾಗಿಯೇ ಜವಾರಿ ಶೈಲಿಯಲ್ಲಿಯೇ ಪ್ರಶ್ನಿಸಿದರು.

ದಲಿತರು ಮುಖ್ಯಮಂತ್ರಿಯಾಗಬಾರದೇ? ಅದು ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ ಯಾವ ಪಕ್ಷದಿಂದ ಆಗುತ್ತಾರೋ ಆಗಲಿ, ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡಲಿ, ಆಗ ಜನ ಪುರಸ್ಕರಿಸುತ್ತಾರೆ, ಇಲ್ಲವಾದರೆ ತೆಗಳುವುದು ತಪ್ಪುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಒಂದಂತೂ ಸತ್ಯ. ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗುವುದು ಶತಸಿದ್ಧ. ಇಂದು ಆಗುತ್ತಾರೋ, ನಾಳೆ ಆಗುತ್ತಾರೋ, ಬಿಜೆಪಿಯಿಂದ ಆಗುತ್ತಾರೋ, ಕಾಂಗ್ರೆಸ್‌ನಿಂದ ಆಗುತ್ತಾರೋ...! ಒಟ್ಟಾರೆಯಾಗಿ ದಲಿತರು ಸಿಎಂ ಆಗುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net