ಲೋಕಸಭೆಯಲ್ಲಿ ಆದ ಭದ್ರತಾ ವೈಫಲ್ಯವನ್ನು ನಾವು ಒಪ್ಪುತ್ತೇವೆ: ಬಿಜೆಪಿ ಸಂಸದ ಮುನಿಸ್ವಾಮಿ

MuniSwamy
Published on

ಕೋಲಾರ: ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್​ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಸಂಬಂಧ ಐವರು ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ಸಂಸದ ಮುನಿಸ್ವಾಮಿ ಲೋಕಸಭೆಯಲ್ಲಿ ಆದ ಭದ್ರತಾ ವೈಫಲ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ಡಿಗಾನಹಳ್ಳಿಯಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಸಂಸತ್ತಿನ ಮೇಲೆ ಈ ಹಿಂದೆ ದಾಳಿ ನಡೆದ ದಿನವೇ ಲೋಕಸಭೆ ಒಳಗೆ ನುಗ್ಗಿರುವ ಕೃತ್ಯ ಗಮನಿಸಿದರೆ ಉಗ್ರಗಾಮಿಗಳು ಹಾಗೂ ನಕ್ಸಲರ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಶಂಕಿಸಿದ್ದಾರೆ.

ಲೋಕಸಭೆಯಲ್ಲಿ ಉಂಟಾದ ಭದ್ರತಾ ವೈಫಲ್ಯ ಸಂಬಂಧ ತನಿಖೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿದಂತೆ ಪ್ರತಾಪ್​ ಸಿಂಹ ಸೇರಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಪ್ರತಾಪ್​ ಸಿಂಹ ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ನವರು ರಾಜಕೀಯ ಮಾಡಬಾರದು ಎಂದಿದ್ದಾರೆ.

Parliament Security Breach

ಲೋಕಸಭೆಯಲ್ಲಿ ಭದ್ರತಾ ವೈಫಲ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇನ್ನೂ ಉನ್ನತಮಟ್ಟದ ಭದ್ರತಾ ವ್ಯವಸ್ಥೆಯ ಅಗತ್ಯವಿದೆ. ಒಳಗೆ ನುಗ್ಗಿದವರನ್ನು ನಾನು, ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಇತರರು ಹಿಡಿದು ಕೊಡಲು ಸಹಾಯ ಮಾಡಿದೆವು. ಕಾಂಗ್ರೆಸ್‌ ಪಕ್ಷದ ಸರ್ಕಾರವಿದ್ದಿದ್ದರೆ ಆರೋಪಿಗಳನ್ನು ಬಂಧಿಸಲು ವರ್ಷ ತೆಗೆದುಕೊಳ್ಳುತ್ತಿತ್ತು. ಈಚೆಗೆ ರಾಜ್ಯದ ವಿಧಾನಸಭೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿಯೊಬ್ಬು ಶಾಸಕರ ಸೀಟಿನಲ್ಲಿ ಕುಳಿತಿರಲಿಲ್ಲವೇ ಆಗ ಏನು ಮಾಡಿದರು ಎಂದು ಪ್ರಶ್ನಿಸಿದ್ದಾರೆ.

ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದಿದೆ. ಇದನ್ನು ಸಹಿಸಲಾರದೆ ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರಲು ಯುವಕರಿಗೆ ಬ್ರೈನ್​ ವಾಶ್​ ಮಾಡಿ ಈ ರೀತಿಯ ಕೆಲಸ ಮಾಡಿಸಿದ್ದಾರೆ. ಮೈಸೂರು ಸಂಸದ ಪ್ರತಾಪಸಿಂಹ ಒಬ್ಬ ದೇಶಪ್ರೇಮಿ ಅವರನ್ನು ಸೋಲಿಸಲು ಪ್ರಯತ್ನ ನಡೆಯುತ್ತಿದೆ. ಯಾರೇ ಪಾಸ್‌ ಕೇಳಿದಾಗ ಕೆಲ ಮಾಹಿತಿ ಪಡೆದುಕೊಂಡು ಕೊಡುತ್ತೇವೆ. ಇನ್ನುಮುಂದೆ ನೂರು ಬಾರಿ ಯೋಚನೆ ಮಾಡಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಪ್ರತಾಪಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎನ್ನಲು ಸಿದ್ದರಾಮಯ್ಯ ಏನು ಪ್ರಧಾನಿಯೇ, ಗೃಹ ಸಚಿವರೇ, ತನಿಖಾಧಿಕಾರಿಯೇ? ಕಾಂಗ್ರೆಸ್‌ನವರು ಚೀನಾ, ಪಾಕಿಸ್ತಾನಕ್ಕೆ ದೇಶದ ಜಾಗ ಬಿಟ್ಟುಕೊಟ್ಟವರು. ಯಾವುದೋ ಧರ್ಮದವರನ್ನು ಮೆಚ್ಚಿಸಲು ದೇಶವನ್ನೇ ಭಾಗ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೋಲಾರ ಸಂಸದ ಮುನಿಸ್ವಾಮಿ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net