ಗೃಹಲಕ್ಷ್ಮಿ ಕಂಡೀಶನ್‌ನಿಂದ ಜನತೆಗೆ ಸಮಸ್ಯೆ - ಶಾಸಕ ವೇದವ್ಯಾಸ ಕಾಮತ್ ಆರೋಪ

d-vedavyasa-kamath-72325
Published on




ಮಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಹಲವು ಕಂಡೀಶನ್ ಹಾಕಿ ಜನರನ್ನು ಸತಾಯಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಹಳೆ ರೇಷನ್ ಕಾರ್ಡ್‌ಗಳಲ್ಲಿ ಮನೆಯ ಯಜಮಾನನ ಹೆಸರೇ ನಮೂದಾಗಿರುತ್ತದೆ. ಆದರೆ ಈಗ ಗೃಹಲಕ್ಷ್ಮಿ ಯೋಜನೆಗೆ ಮನೆಯ ಯಜಮಾನಿಯ ಹೆಸರೇ ಇರಬೇಕು ಎಂಬ ನಿಯಮ ಹಾಕಲಾಗಿದೆ. ಇದು ಸಮಸ್ಯೆಯಾಗಿ ಪರಿಣಮಿಸಿದೆ. ಫಲಾನುಭವಿಗಳಾಗಲು ಹೊಸ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಜನಸಾಮಾನ್ಯರು ಅನಗತ್ಯ ಕಚೇರಿಗಳಿಗೆ ಅಲೆದಾಡುವಂತೆ ಆಗಿದೆ. ಈ ನಡುವೆ ಸರ್ವರ್, ಒಟಿಪಿ ಸಮಸ್ಯೆಗಳಿಂದಾಗಿ ಜನರಿಗೆ ತಕ್ಷಣಕ್ಕೆ ಈ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಚುನಾವಣೆ ರಾಜಕೀಯಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಹಲವು ಕಂಡೀಶನ್‌ಗಳನ್ನು ಹಾಕಿ ಜನರನ್ನು ಕಾಂಗ್ರೆಸ್ ಸರ್ಕಾರ ವಂಚಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಕಳೆದ 2 ತಿಂಗಳಿಂದ ಬೆಲೆಯೇರಿಕೆಯಿಂದ ಹೈರಾಣಾಗಿರುವ ಜನ ಸಾಮಾನ್ಯ ಕುರಿತು ಕಾಳಜಿಯಿಲ್ಲದ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುವುದರಲ್ಲೇ ನಿರತವಾಗಿದೆ.ಗೃಹಜ್ಯೋತಿ ಗ್ಯಾರಂಟಿ ಘೋಷಿಸಿದ್ದ ರಾಜ್ಯ ಸರ್ಕಾರ ಜನತೆಗೆ ವಿದ್ಯುತ್ ದರ ಏರಿಕೆಯ ಬರೆ ಹಾಕಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಹೋಟೆಲು ತಿನಸುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಬೆಲೆಯೇರಿಕೆಯಾಗಿದೆ ಎಂದು ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ನಾಪತ್ತೆಯಾಗಿದ್ದಾರೆ ಎಂದು ಶಾಸಕ ಕಾಮತ್ ಟೀಕಿಸಿದ್ದಾರೆ.
.............................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net