ಬಿಜೆಪಿ ಭ್ರಷ್ಟಾಚಾರಕ್ಕೆ ಶಾಸಕರ ಮನೆಯ ನೋಟಿನ ರಾಶಿಯೇ ಸಾಕ್ಷಿ

u t kadar
Published on

ಮಂಗಳೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಶಾಸಕರ ಮನೆಯಲ್ಲಿ ಸಿಕ್ಕಿದ ಕೋಟಿಗಟ್ಟಲೆ ನೋಟಿನ ರಾಶಿಯೇ ಸಾಕ್ಷಿ. ‘ಬಿಜೆಪಿಯೇ ಭರವಸೆ’ ಎಂದಿರುವುದನ್ನು ‘ಭ್ರಷ್ಟರಿಗೆ ಬಿಜೆಪಿಯೇ ಭರವಸೆ’ಯಾಗಿದೆ ಎಂದು ಬದಲಾಯಿಸುವುದು ಉತ್ತಮ ಎಂದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.


ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪಿಸುವ ಬಿಜೆಪಿಗರಿಗೆ ಈಗ ಅವರದೇ ಶಾಸಕ ಹಾಗೂ ಅವರ ಪುತ್ರ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವುದು ನುಂಗಲಾರದ ತುತ್ತಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಆಗಮಿಸುವ ಬಿಜೆಪಿ ನಾಯಕರು, ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ವಿಚಾರಗಳನ್ನು ಪ್ರಸ್ತಾಪಿಸದೆ ಜನತೆಗೆ ಮೋಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆ ಬಗ್ಗೆ ಮೌನ ವಹಿಸುತ್ತಿದ್ದಾರೆ. ರಾಜ್ಯಕ್ಕೆ ಆಗಮಿಸುವ ಕೇಂದ್ರ ಬಿಜೆಪಿ ನಾಯಕರು ತಮ್ಮ ನಿಲುವನ್ನು ಜನತೆಗೆ ಸ್ಪಷ್ಟಪಡಿಸಬೇಕು ಒತ್ತಾಯಿಸಿದರು.


ಭ್ರಷ್ಟಾಚಾರದ ಚಿಲುಮೆ ಬಿಜೆಪಿ:
ಈ ಬಾರಿ ಆದಾಯದ ಮೂಲ ಇಲ್ಲದ ಹೆಚ್ಚುವರಿ ಬಜೆಟ್ ಮಂಡಿಸಲಾಗಿದೆ. ಕೃಷಿಯಲ್ಲೂ ಆದಾಯ ಕಡಿಮೆ ತೋರಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಸೂಕ್ತ ಅನುದಾನ ನೀಡಿಲ್ಲ. ಹೀಗಿರುವಾಗ ಶೇ. 40 ಕಮಿಷನ್ ಮುಂದಿನ ದಿನಗಳಲ್ಲಿ ಶೇ.100 ತಲುಪಿದರೂ ಅಚ್ಚರಿ ಇಲ್ಲ. ಉತ್ತರ ಪ್ರದೇಶ, ಬಿಹಾರ ಮಾದರಿಯಲ್ಲಿ ಕರ್ನಾಟಕವೂ ಭ್ರಷ್ಟಾಚಾರದಲ್ಲಿ ದಾಪುಗಾಲು ಇಡುತ್ತಿದೆ. ಕಾಂಗ್ರೆಸ್‌ನ್ನು ಭ್ರಷ್ಟಾಚಾರದ ಗಂಗೋತ್ರಿ ಎನ್ನುವ ಬಿಜೆಪಿಯೇ ಭ್ರಷ್ಟಾಚಾರದ ಚಿಲುಮೆ ಎಂದು ಖಾದರ್ ಹೇಳಿದರು.


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಬಿಜೆಪಿ ಅವಧಿಯ ಎಲ್ಲ ಭ್ರಷ್ಟಾಚಾರ ವಿಚಾರಗಳನ್ನು ತನಿಖೆ ನಡೆಸಲಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಜನಸಾಮಾನ್ಯರ ರಕ್ಷಣೆಯೇ ಕಾಂಗ್ರೆಸ್‌ನ ಗುರಿಯಾಗಲಿದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ಮಹಮ್ಮದ್ ಕುಂಜತ್ತಬೈಲ್, ನಝೀರ್ ಬಜಾಲ್ ಇದ್ದರು.


ಎಸ್‌ಡಿಪಿಐ ಕೂಡ ಸ್ಪರ್ಧಿಸಲಿ
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರನ್ನು ಯಾರೂ ಬೆಂಬಲಿಸುವುದಿಲ್ಲ, ಬಿಜೆಪಿ, ಎಸ್‌ಡಿಪಿಐ ಒಂದೇ ಮನಸ್ಸಿನವರು. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ನನಗೆ ಭರವಸೆ ಇದೆ, ಜನತೆ ನಮ್ಮನ್ನು ಬೆಂಬಲಿಸುತ್ತಾರೆ. ಮತ ವಿಭಜನೆಯ ಪ್ರಶ್ನೆಯೇ ಇಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅಧಿಕಾರ ಇದೆ, ಎಸ್‌ಡಿಪಿಐ ಕೂಡ ಸ್ಪರ್ಧಿಸಲಿ ಎಂದು ಶಾಸಕ ಖಾದರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net