ನಟ ಯಶ್ ವರ್ಚಸ್ಸು ದುರ್ಬಳಕೆ ಮಾಡಿದ ಬಿಜೆಪಿ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

lakshman
Published on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡ ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಯಶ್ ಅವರ ವರ್ಚಸ್ಸನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಒಂದುವೇಳೆ ಕಾರ್ಯಕ್ರಮಕ್ಕೆ ನಟ ಯಶ್ ಬಾರದೆ ಹೋಗಿದ್ದಿದ್ದರೆ ಯುವಜನರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ಕಲ್ಲಿನಲ್ಲಿ ಹೊಡೆಯುತ್ತಿದ್ದರು. ಯಶ್ ಬಂದು ಅವರ ಮಾನ ಮರ್ಯಾದೆಯನ್ನು ಉಳಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ಯುವಜನರಿಗೆ ಉಪಯೋಗವಾಗುವಂತಹ ಯಾವುದೇ ಕಾರ್ಯಕ್ರಮವನ್ನು ಯುವಜನ ಮಹೋತ್ಸವದಲ್ಲಿ ರೂಪಿಸಲಿಲ್ಲ. ಅನಗತ್ಯವಾಗಿ ನಗರದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆ ತರಲಾಯಿತು. ಯಶ್ ಬಾರದೆ ಇದಿದ್ದರೆ ವಿದ್ಯಾರ್ಥಿಗಳು ಕಾರ್ಯಕ್ರಮ ಬರುತ್ತಿರಲಿಲ್ಲ. ಇದರಿಂದ ಬಿಜೆಪಿಗೆ ತೀವ್ರ ಮುಖಭಂಗವಾಗುತಿತ್ತು ಎಂದರು.

ರಾಷ್ಟ್ರ ಧ್ವಜವನ್ನು ಬಳಸಿಕೊಂಡು ಯುವ ಸಮುದಾಯವನ್ನು ಬಿಜೆಪಿಗೆ ಸೆಳೆಯುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರೃಕ್ಕಾಗಿ ಹೋರಾಡಿದ ಯಾವುದೇ ವ್ಯಕ್ತಿಗಳನ್ನು ಅವರು ಸ್ಮರಿಸಲಿಲ್ಲ ಎಂದು ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಸ್ಥಾನ ಬದಲಾಗುವುದು ನೂರಕ್ಕೆ ನೂರರಷ್ಟು ಸತ್ಯ. ಇದೀಗ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಬಿಜೆಪಿ ಮುಖಂಡರು ತಮ್ಮ ಹೇಳಿಕೆಗೆ ತದ್ವಿರುದ್ಧ ನಡೆಯುವ ಪ್ರವೃತ್ತಿ ಹೊಂದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಅವರು ಹೇಳಿಕೆ ನೀಡಿದ 20 ನಿಮಿಷಗಳ ನಂತರ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಲಾಯಿತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net