

ನಂಜನಗೂಡು: ಭಾರತೀಯ ಜನತಾ ಪಾರ್ಟಿಯು ಆರು ವರ್ಷಗಳಿಗೊಮ್ಮೆ ನೋಂದಣಿ ಮೂಲಕ ತನ್ನ ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ಗೆಲ್ಲಲು ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದು ಪಕ್ಷ ಜಿಲ್ಲಾ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದರು.
ಮುಂಬರುವ ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಹಿನ್ನೆಲೆ ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ವತಿಯಿಂದ ನಂಜನಗೂಡು ನಗರ ಮಂಡಲದ ಬೂತ್ ಸಂಖ್ಯೆ 34, 35, 36, 37, 41, 42 ಹಾಗೂ ಹೆಗ್ಗಡಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸಂಬಂಧಿಸಿದ ಬೂತ್‌ಗಳ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಬೂತ್‌ಗಳ ಮೇಲ್ಮಟ್ಟದ ಅಧ್ಯಕ್ಷರು ನಿಯೋಜನೆ ಆಗುವ ಮೂಲಕ ಪ್ರತೀ ಬೂತ್‌ನಲ್ಲೂ 13 ಜನರ ಒಂದು ಸಮಿತಿ ಇದ್ದು, ಬೂತ್ ಅಧ್ಯಕ್ಷ, ಬೂತ್ ಕಾರ್ಯದರ್ಶಿ, ಪೇಜ್ ಪ್ರಮುಖ್, ಮನ್ ಕಿ ಬಾತ್ ಪ್ರಮುಖ್ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಂದೊಂದು ಬೂತ್ ಅನ್ನು ಗೆಲ್ಲಬೇಕಾದರೆ ಆ ಪ್ರತಿ ಬೂತ್‌ನಲ್ಲೂ ಸಮಿತಿ ರಚನೆಯಾಗಿರಬೇಕು. ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ರೀತಿಯಲ್ಲಿ ಗೆಲ್ಲಬೇಕೆಂದರೆ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳಾಗಲು ಬಯಸುವವರು ಮನೆಮನೆಗೆ ತೆರಳಿ ಚಿರಪರಿಚಿತರಾಗಿ ಸದಸ್ಯತ್ವ ನೋಂದಣಿ ಬಳಿಕ ಆ ಬೂತ್ ಅನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ನಂಜನಗೂಡಿನಲ್ಲಿ 251 ಬೂತ್ ಇದ್ದು, ಪ್ರತಿ ಬೂತ್‌ನಲ್ಲಿ ಬೂತ್ ಸಮಿತಿ ಮಾಡಿಕೊಡುವ ನಿಟ್ಟಿನಲ್ಲಿ ನಾನೂ ಕೂಡ ಪ್ರತಿ ಬೂತ್ ಗಳಿಗೂ ಭೇಟಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಭಾರತೀಯ ಜನತಾ ಪಾರ್ಟಿಯನ್ನು ಬೂತ್ ಮಟ್ಟದಿಂದ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.
ಸಂಘಟನಾ ಪರ್ವ ವಿಭಾಗ ಸಂಚಾಲಕ ಸಚ್ಚಿದಾನಂದಮೂರ್ತಿ ಮಾತನಾಡಿ, ಇಂದು ಹತ್ತರಿಂದ ಹದಿನೈದು ಬೂತ್ ಅಧ್ಯಕ್ಷರು ನಾವು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆ ಮಾಡಿದ್ದೇವೆ. ಇದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲ ಬೂತ್‌ಗಳಲ್ಲೂ ಸಹ ಸಂಘಟನಾ ಪರ್ವ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷದ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸುತ್ತಿ 78 ಲಕ್ಷ ಸದಸ್ಯತ್ವ ನೋಂದಣಿ ದಾಖಲೆ ಬರೆದಿದ್ದಾರೆ. ಮತ್ತಷ್ಟು ಸದಸ್ಯತ್ವ ನೋಂದಣಿ ಮಾಡಲು ಬೂತ್ ಮಟ್ಟದಿಂದ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.
ಬಿಜೆಪಿ ನಗರ ಅಧ್ಯಕ್ಷ ಸಿದ್ದರಾಜು, ನಂಜನಗೂಡು ನಗರಸಭಾ ಸದಸ್ಯರಾದ ಮಹದೇವಪ್ರಸಾದ್, ಕೃಷ್ಣಪ್ಪಗೌಡ, ರಾಜ್ ಅರಸ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹೇಶ್ ಮಡವಾಡಿ, ಬೂತ್ ಅಧ್ಯಕ್ಷರು, ನಗರಸಭಾ ಸದಸ್ಯರು, ಹಾಲಿ-ಮಾಜಿ ಜಿ.ಪಂ ತಾ.ಪಂ ಸದಸ್ಯರು ಭಾಗವಹಿಸಿದ್ದರು.