

ಹುಬ್ಬಳ್ಳಿ: ದೇಶಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದ್ದು, ಕೇವಲ 3 ದಿನದಲ್ಲಿ 1.5 ಕೋಟಿ ಸದಸ್ಯರ ನೋಂದಣಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಈಗಾಗಲೇ 4 ಲಕ್ಷ ಸದಸ್ಯರು ನೋಂದಣಿ ಮಾಡಿಸಿದ್ದು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರವು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಕೇಂದ್ರ ವರಿಷ್ಠರು ಪ್ರತಿ ಬೂತ್ 300 ಜನರ ನೋಂದಣಿ ಮಾಡಿಸಲು ಗುರಿ ನೀಡಿದ್ದಾರೆ. ಇದಕ್ಕಾಗಿ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕೆಂದು ಸೂಚಿಸಿದರು.
ಕಳೆದ ಬಾರಿ ಬಿಜೆಪಿ 11 ಕೋಟಿ ಸದಸ್ಯತ್ವ ಮಾಡಿಸಿ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದೀಗ ಇದನ್ನು ದಾಟಿ ಹೋಗಬೇಕು ಎಂದರು.
ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಸದಸ್ಯತ್ವ ಅಭಿಯಾನ ಬಿಜೆಪಿ ಕಾರ್ಯಕರ್ತರ ಪವಿತ್ರವಾದ ಕೆಲಸವಾಗಿದೆ. ಇದರಲ್ಲಿ ಪಾಲ್ಗೊಂಡು ಅಭಿಯಾನದಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಬಿ.ಎಚ್. ಪೂಜಾರ, ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಲಿಂಗರಾಜ ಪಾಟೀಲ, ಸಂಜಯ ಕಪಟ್ಕರ್, ಮಹೇಂದ್ರ ಕೌತಾಳ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಇತರರು ಇದ್ದರು.