ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ

dinesh
Published on

ಬಂಟ್ವಾಳ: ಫರಂಗಿಪೇಟೆಯ ಸ್ಟುಡಿಯೋ ಮಾಲೀಕ, ಬಿಜೆಪಿ ಪುದು ಶಕ್ತಿಕೇಂದ್ರದ ಸಾಮಾಜಿಕ ಜಾಲತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.

ಕಟ್ಟಡದ ಮೊದಲ ಮಹಡಿಯಲ್ಲಿ ಬುಧವಾರ ರಾತ್ರಿ ವೇಳೆ ಅವರ ಸ್ಟುಡಿಯೋ ಮಾತ್ರ ತೆರೆದಿದ್ದು, ಈ ಸಂದರ್ಭ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಿಂದ ಅವರ ತಲೆ, ಹೊಟ್ಟೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ದಿನೇಶ್ ಕೊಟ್ಟಿಂಜ ಫೋಟೊಗ್ರಾಫರ್ ಆಗಿರುವುದರ ಜತೆಗೆ ಬಿಜೆಪಿಯಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ದಿನಪತ್ರಿಕೆಯೊಂದಕ್ಕೆ ಫರಂಗಿಪೇಟೆ ವರದಿಗಾರರೂ ಆಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದು ಒಂದು ವಾರದ ಅವಧಿಯಲ್ಲಿ ತಾಲೂಕಿನಲ್ಲಿ ನಡೆದ ಮೂರನೆ ತಲವಾರು ದಾಳಿ. ಆರೋಪಿಗಳ ಮನೆಗೆ ಪೊಲೀಸರು ರಾತ್ರಿ ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net