ಸಿಎಂ ಕುರ್ಚಿಗೆ ಕಂಟಕ ಭಯದಿಂದ ನಿವೇಶನ ವಾಪಾಸು

IMG-20241015-WA0019
Published on

ಉಡುಪಿ: ರಾಜ್ಯ ಸರ್ಕಾರ ಕೇವಲ ಒಂದೂವರೆ ವರ್ಷದಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದು, ಸ್ವತ@ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ವಾಲ್ಮೀಕಿ ನಿಗಮ ಹಗರಣ 87 ಕೋಟಿ ರೂ. ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಮೂಡಾದಲ್ಲಿ 5 ಸಾವಿರ ಕೋಟಿ ರೂ. ಬೆಲೆಬಾಳುವ ನಿವೇಶನ ದಲ್ಲಾಳಿಗಳಿಗೆ ಮಾರಿಕೊಂಡಿದ್ದಾರೆ. ಮೂಡಾ ಹಗರಣದಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತಿರುವಾಗ ಭಯಭೀತರಾಗಿ 14 ನಿವೇಶನಗಳನ್ನು ವಾಪಾಸು ಮಾಡುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳಿಯ ಜನಪ್ರತಿನಿಧಿಗಳ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್​ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಜಿಲ್ಲಾ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್​ ಸರ್ಕಾರಕ್ಕೆ ಅವಿಭಜಿತ ದಕ ಜಿಲ್ಲೆಯೆಂದರೆ ಅಲರ್ಜಿ. ಹೀಗಾಗಿ ಜಿಲ್ಲಾಉಸ್ತುವಾರಿ ಸಚಿವರನ್ನು ಬಿಟ್ಟರೆ ಬೇರೆ ಸಚಿವರು ಬಂದು ಇಲಾಖಾ ಪ್ರಗತಿ ಪರಿಶೀಲನೆ ನಡೆಸುತ್ತಿಲ್ಲ. 1 ರೂ. ಅನುದಾನ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ನೀಡಿದ್ದರು. ಮುಖ್ಯಮಂತ್ರಿಗಳಿಗೆ ಕರ್ನಾಟಕವೆಂದರೆ ಬೆಂಗಳೂರು ಮತ್ತು ಮೈಸೂರು ಎಂಬಂತಾಗಿದೆ. ಬೇರೆ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಆಸಕ್ತಿಯಿಲ್ಲ.

ಕರಾವಳಿ ಜನರು ರಾಷ್ಟ್ರಪ್ರೇಮ ಹೊಂದಿರುವ ದೇಶಭಕ್ತರು. ಎಲ್ಲಾ ವರ್ಗದ ಜನರನ್ನು ಪ್ರೀತಿಸುವವರು. ಆದರೆ ಜಾತಿ&ಜಾತಿಗಳ ಮಧ್ಯೆ ವಿಷಬೀಜಬಿತ್ತುವ ಕಾಂಗ್ರೆಸ್​ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುತ್ತದೆ. ಹುಬ್ಬಳ್ಳಿ ಗಲಭೆ ಬಗ್ಗೆ ಎನ್​ ಐ ಎ ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ಕ್ಯಾಬಿನೆಟ್​ ಉಪಸಮಿತಿ ರಚನೆ ಮಾಡಿ ಕೇಸ್​ ವಾಪಾಸು ಪಡೆಯುವ ಕೆಲಸ ಮಾಡಿದೆ. ಈ ಬಗ್ಗೆ ರಾಜ್ಯದ ಜನ ಕಾಂಗ್ರೆಸ್​ ಅನ್ನು ಕ್ಷಮಿಸುವುದಿಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ.

ರಾಜ್ಯ ಸರ್ಕಾರ ಪಾಪರ್
ವಿಧಾನ ಪರಿಷತ್​ ವಿಪಕ್ಷ ನಾಯಕ ಆರ್​. ಅಶೋಕ್​ ಮಾತನಾಡಿ, ಮುಖ್ಯಮಂತ್ರಿ ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡುವ ಸಾಧ್ಯತೆಗಳಿದ್ದು, 3 ರಿಂದ 4 ಸಾವಿರ ಕೋಟಿ ರೂ. ಡಿನೋಟಿಫಿಕೇಶನ್​ ಹಗರಣದ ಬಗ್ಗೆ ಕೆಂಪಣ್ಣ ಆಯೋಗದ ವರದಿ ಬಂದರೆ ರಾಜೀನಾಮೆ ಅನಿವಾರ್ಯವಾಗಲಿದೆ. ಸಿದ್ದರಾಮಯ್ಯ ಕಾಂಗ್ರೆಸ್​ ಒಡೆದು ಬಿಡುತ್ತಾರೆ. ನನಗೆ ಅಧಿಕಾರ ಸಿಗದಿದ್ದರೆ ಯಾರಿಗೂ ಬೇಡ ಎಂಬ ಧೋರಣೆ ಹಳೆ ಕಾಂಗ್ರೆಸಿಗರಿಗೆ ಅರ್ಥವಾಗಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದ್ದು, ಕಾಂಗ್ರೆಸ್​ ಶಾಸಕರೇ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಸಾರಿಗೆ ಇಲಾಖೆ ಸಿಬ್ಬಂದಿ, ಅಂಗನವಾಡಿ ನೌಕರರಿಗೆ ಸಂಬಳ ಕೋಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲ. ಹೈನುಗಾರರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ನೇಮಕಾತಿಗಳು ನಡೆಯುತ್ತಿಲ್ಲ. ಸರ್ಕಾರ ಪಾಪರ್​ ಆಗಿದೆ. ಕೇಂದ್ರ ಸರ್ಕಾರ ನೀಡಿದ ವಾಲ್ಮೀಕಿ ನಿಗಮ ಹಣ ಲೂಟಿ ಮಾಡಿಯಾಗಿದೆ. ಇನ್ನೇನಾದರೂ ಹಣ ಬಂದರೆ ಮತ್ತೆ ಲೂಟಿ ಮಾಡುತ್ತಾರೆ ಅಂತಾ ಜನಕ್ಕೆ ಭಯವಾಗಿದೆ ಎಂದು ಹೇಳಿದರು.

ವಿಧಾನಸೌಧಕ್ಕೆ ಮುತ್ತಿಗೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಗ್ರಾಪಂ ಅಧಿಕಾರ ಮೊಟಕುಗೊಳಿಸಿದ್ದು, 9&11 ನೆ ಗ್ರಾಪಂ ಬದಲಾಗಿ ನಗರಾಭಿವೃದ್ಧಿ ಪ್ರಾಧಿಕಾರ ನೀಡುವಂತೆ ನಿಯಮ ತಿದ್ದುಪಡಿ ಮಾಡಿದೆ. ಪ್ರಾಧಿಕಾರದಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ 12 ಲಕ್ಷ ಹಾಗೂ ಜಿಲ್ಲೆಯಲ್ಲಿ 30 ರಿಂದ 40 ಸಾವಿರ ಬಿಪಿಎಲ್​ ಕಾರ್ಡ್​ ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಬಡವರ ಸವಲತ್ತು ಕಸಿಯುವ ಅಪಾಯ ಎದುರಾಗಿದೆ. ಹೀಗಾಗಿ 12 ಲಕ್ಷ ಸಂತ್ರಸ್ತರು ವಿಧಾನಸೌಧಕ್ಕೆ ಹಾಗೂ ಶಾಸಕರು ಪ್ರತಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.


ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್​ ಬಿಜೆಪಿ ಅಭ್ಯರ್ಥಿ ಕಿಶೋರ್​ ಕುಮಾರ್​ ಪುತ್ತೂರು ಮಾತನಾಡಿದರು.


ದ.ಕ. ಸಂಸದ ಬ್ರಿಜೇಶ್​ ಚೌಟ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್​ ಕುಮಾರ್​, ಶಾಸಕರಾದ ಯಶ್ಪಾಲ್​ ಎ. ಸುವರ್ಣ, ಸುರೇಶ್​ ಶೆಟ್ಟಿ ಗುರ್ಮೆ, ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಹರೀಶ್​ ಪೂಂಜಾ, ವಿಪ ಸದಸ್ಯ ಪ್ರತಾಪ್​ ಸಿಂಹ ನಾಯಕ್​, ಮುಖಂಡರಾದ ಉದಯ್​ ಕುಮಾರ್​ ಶೆಟ್ಟಿ, ಪ್ರಮೋದ್​ ಮಧ್ವರಾಜ್​, ಸುರೇಶ್​ ನಾಯಕ್​, ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್​ ಕುಂದಾಪುರ ಸ್ವಾಗತಿಸಿ, ಪ್ರ.ಕಾ. ದಿನಕರ ಶೆಟ್ಟಿ ಹೆರ್ಗಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net