

ಹುಬ್ಬಳ್ಳಿ : ಮಹಾನಗರ ಪಾಲಿಕೆ ಮಹಿಳಾ ಸದಸ್ಯೆಯರು ಅಥವಾ ಮಹಾಪೌರ, ಉಪ ಮಹಾಪೌರರ ಆಡಳಿತದಲ್ಲಿ ಅವರ ಪತಿ, ಪುತ್ರ ಸೇರಿದಂತೆ ಸಂಬಂಧಿಕರು ಹಸ್ತಕ್ಷೇಪ ಮಾಡಬಾರದೆಂಬ ಕಟ್ಟುನಿಟ್ಟಿನ ಸೂಚನೆಯನ್ನು ನಗರದಲ್ಲಿ ಶುಕ್ರವಾರ ನಡೆದ ಮಹಾನಗರ ಜಿಲ್ಲಾ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ನೀಡಲಾಗಿದೆ.
ಮಹಾಪೌರ ವೀಣಾ ಬರದ್ವಾಡ ಅವರ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೋರ್ ಕಮೀಟಿ ಸಭೆಯಲ್ಲಿ ಕೇಳಿಬಂದವು.
ಜನಪ್ರತಿನಿಧಿಗಳ ಅಧಿಕಾರದಲ್ಲಿ ಅವರ ಕುಟುಂಬದವರು ಹಸ್ತಕ್ಷೇಪ ಮಾಡುವುದು ಬಿಜೆಪಿಯ ಸಿದ್ಧಾಂತಗಳಿಗೆ ವಿರುದ್ಧವಾದದ್ದು. ಈ ರೀತಿಯ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ ಅವರು ಮಹಾಪೌರ ವೀಣಾ ಬರದ್ವಾಡ ಅವರಿಗೆ ಸೂಚಿಸಿದರು ಎಂದು ಹೇಳಲಾಗಿದೆ.
ಪಾಲಿಕೆಯ ಇತರ ಮಹಿಳಾ ಸದಸ್ಯರು ಸಹ ತಮ್ಮ ಕುಟುಂಬದವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರ್ ಕಮೀಟಿಯಲ್ಲಿ ಸೂಚಿಸಲಾಯಿತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಮತ್ತಷ್ಟು ಆದ್ಯತೆ ನೀಡಲು ಸಲಹೆ ನೀಡಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋತರು. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ತಳಹಂತದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸೂಚನೆ ನೀಡಲಾಯಿತು.
ಆ. 28ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ಮತ್ತೊಂದು ಸುತ್ತಿನ ಕೋರ್ ಕಮೀಟಿ ಸಭೆ ನಡೆಯಲಿದ್ದು, ಮತ್ತಷ್ಟು ವಿಷಯಗಳು ಚರ್ಚೆಗೆ ಬರಲಿವೆ.
ಮಹಾಪೌರ ವೀಣಾ ಬರದ್ವಾಡ, ಉಪ ಮಹಾಪೌರ ಸತೀಶ ಹಾನಗಲ್, ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಶಿವು ಹಿರೇಮಠ ಸೇರಿದಂತೆ ಬಿಜೆಪಿಯ ಇತರ ಹಿರಿಯ ಮುಖಂಡರು ಸಭೆಯಲ್ಲಿ ಹಾಜರಿದ್ದರು.