ಗ್ಯಾರಂಟಿ ಜನರ ಕೈಸೇರುವವರೆಗೂ ಹೋರಾಟ

bjp meeting
Published on

ಮಾಜಿ ಸಚಿವ ಆರ್.ಅಶೋಕ್ ಮಾಹಿತಿ


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕಾಂಗ್ರೆಸ್ ಸರ್ಕಾರ ಚುನಾವಣೆ ಮೊದಲು ಘೋಷಣೆ ಮಾಡಿದ ಎಲ್ಲ ಗ್ಯಾರಂಟಿಗಳು ಜನರಿಗೆ ತಲುಪಬೇಕು. ಅಲ್ಲಿಯವರೆಗೆ ಗ್ರಾಪಂ, ತಾಲೂಕು, ಜಿಲ್ಲಾಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಡಿಪಿವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಲಿಬಾಬಾ ಮತ್ತು 40 ಕಳ್ಳರು ಎಂಬಂತೆ ಬಿಹಾರದಲ್ಲಿ ಕಳ್ಳರೆಲ್ಲ ಒಂದೆಡೆ ಸೇರಿದ್ದಾರೆ. ಕಲ್ಲಿದ್ದಲು, ಇದ್ದಿಲು ತಿಂದವರು ಇದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಇರುವಾಗ ಲೂಟಿ ಹೊಡೆಯಲು ಆಗಲ್ಲ ಎಂದು ಅವರನ್ನು ಕಳುಹಿಸಿ ಮತ್ತೆ ಲೂಟಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ, ಮೋದಿ ವಿಶ್ವದ ನಾಯಕ ಎಂದು ಅಮೇರಿಕದಲ್ಲೇ ಗುರುತಿಸಲಾಗುತ್ತಿದೆ. ವಿದೇಶದಲ್ಲಿ ಉಡುಗೊರೆಯಾಗಿ ಮೈಸೂರಿನ ಗಂಧದ ಪೆಟ್ಟಿಗೆ ನೀಡುವ ಮೂಲಕ ನಮ್ಮ ಸಂಸ್ಕೃತಿ ಬಗ್ಗೆ ವಿದೇಶಗಳಿಗೂ ತಿಳಿಸಿಕೊಡುತ್ತಿದ್ದಾರೆ. ಇದಕ್ಕಾಗಿ ಮೋದಿ ಎಂಬ ನಾಯಕನನ್ನು ಮತ್ತೆ ಗೆಲ್ಲಿಸಲು ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದರು.
ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ, ಅಕ್ಕಿ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಅದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿದರು. ಆದರೆ, ಒಂದೂವರೆ ತಿಂಗಳಾದರೂ ಆಗಿಲ್ಲ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಕೋವಿಡ್ ಸಮಯದಲ್ಲಿ ಲಸಿಕೆ, ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ, ರೈತರ ಖಾತೆಗೆ ನೇರವಾಗಿ ತಲುಪುವ ಕಿಸಾನ್ ಸಮ್ಮಾನ್ ಯೋಜನೆಯಂತಹ ಅನೇಕ ಕಾರ್ಯಕ್ರಮ ಆರಂಭಿಸಿದೆ ಎಂದರು.
ವಿಶ್ವದಲ್ಲೇ ಹೆಚ್ಚು ಆನ್‌ಲೈನ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ 5ನೇ ಸ್ಥಾನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯೇ ಕಾರಣ ಎಂದ ಅವರು, ದೇವನಹಳ್ಳಿಗೆ ಐ ೆನ್ ಕಂಪನಿ ಬರುತ್ತಿದ್ದು, 1ಲಕ್ಷ ಕ್ಕೂ ಹೆಚ್ಚು ಉದ್ಯೋಗ ಸಿಗಲಿದೆ. ಕಾರ್ಯಕರ್ತರು ಸರ್ಕಾರದ ಯೋಜನೆ ಬಗ್ಗೆ ಜನರಿಗೆ ಮಾಹಿತಿ ತಲುಪಿಸಬೇಕು. ರಾಜ್ಯದಾದ್ಯಂತ ಮಹಾ ಸಂಪರ್ಕ ಅಭಿಯಾನ ಮಾಡಲಾಗುತ್ತಿದೆ. ಈ ಮೂಲಕ ಹಳ್ಳಿಹಳ್ಳಿಯಲ್ಲೂ ಜನರನ್ನು ತಲುಪಬೇಕು ಎಂದರು.
ಕೋಲಾರ ಸಂಸದ ಮುನಿಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ವಿಫಲವಾಗಿ, ನಾವು ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಮುಂದೆ ಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ, ವಿಶ್ವನಾಯಕನನ್ನಾಗಿ ಮಾಡಬೇಕು ಎಂದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಪ್ರಧಾನಿ ಮೋದಿ ಮುಂದಿನ 25 ವರ್ಷಗಳ ಗುರಿಯೊಂದಿಗೆ ಬಜೆಟ್ ಮಾಡುತ್ತಾರೆ. ವ್ಯಾಕ್ಸಿನ್ ಕೊಟ್ಟಾಗ, ಅಕ್ಕಿ ಕೊಟ್ಟಾಗ, ಯಾವುದೆ ಜಾತಿ ನೋಡಲಿಲ್ಲ. ಪ್ರಧಾನಿಯವರ ನಿಲುವು ಎಂದಿಗೂ ದೇಶದ ಹಿತಕ್ಕೆ ಮುನ್ನುಡಿಯಾಗಿರುತ್ತದೆ ಎಂದರು.
ಬಿಜೆಪಿ ಮುಖಂಡ ಸಪ್ತಗಿರಿಗೌಡ, ಜಿಲ್ಲಾ ಕಾರ್ಯದರ್ಶಿ ಗೋಪಿನಾಥ್, ಹಿರಿಯ ಮುಖಂಡರಾದ ಕೆ.ಎಂ. ಹನುಮಂತರಾಯಪ್ಪ, ಬಿ.ಸಿ.ನಾರಾಯಣಸ್ವಾಮಿ, ಎಂ.ಜಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಸುಧಾರಣಿ ಲಕ್ಷ್ಮೀನಾರಾಯಣ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಾಗೇಶ್, ಡಿಪಿಎ ಮಾಜಿ ನಿರ್ದೇಶಕ ಆನಂದ್ ಮೂರ್ತಿ, ಎನ್.ಕೆ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net