

ಕೊಳ್ಳೇಗಾಲ : ಕೊಳ್ಳೇಗಾಲ ನಗರ ಮಂಡಲ ಅಧ್ಯಕ್ಷ ಸ್ಥಾನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆಲವು ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಎದುರಿನ ರಸ್ತೆಯಲ್ಲಿರುವ 7ನೇ ವಾರ್ಡ್ ಬೂತ್ ಅಧ್ಯಕ್ಷ ಶಂಕರ್ ನಿವಾಸದಲ್ಲಿ ಬುಧವಾರ ಸಂಜೆ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ನಗರ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಮಂಡಲ ಅಧ್ಯಕ್ಷರಾಗಿ ಎನ್.ಪರಮೇಶ್ವರಯ್ಯ ಅವರನ್ನು ಆಯ್ಕೆ ಮಾಡಿರುವುದು ಸರಿಯಿಲ್ಲ. ಏಕೆಂದರೆ, ಅವರಿಗಿಂತಲೂ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿದ್ದಾರೆ. ಅಂಥವರನ್ನು ಪರಿಗಣಿಸಿಲ್ಲ. ಇದು ನಮಗೆ ಬಹಳ ನೋವುಂಟು ಮಾಡಿದೆ. ಅಧ್ಯಕ್ಷರ ಆಯ್ಕೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಉಪಾಧ್ಯಕ್ಷ ಎನ್.ಮಹೇಶ್ ಗಮನ ಸೆಳೆಯೋಣ ಎಂದು ತೀರ್ಮಾನ ತೆಗೆದುಕೊಂಡರು. ಇದೇ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ನಿರಂಜನ್ ಅವರಿಗೆ ಫೋನ್ ಕರೆ ಮಾಡಿ ಅಧ್ಯಕ್ಷರ ಆಯ್ಕೆ ಬಗ್ಗೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರಂಜನ್, ಈ ಬಗ್ಗೆ ನಿಮ್ಮೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾ ಬಿಜೆಪಿ ವಕ್ತಾರ ಬಸವರಾಜಪ್ಪ ಮಾತನಾಡಿ, ನಾವು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಆದರೆ ನಗರ ಮಂಡಲ ಅಧ್ಯಕ್ಷರ ಆಯ್ಕೆಗೆ ನಮ್ಮ ವಿರೋಧವಿದೆ. ಈ ವಿಚಾರವನ್ನು ರಾಜ್ಯ ಮಟ್ಟದ ನಾಯಕರ ಗಮನಕ್ಕೆ ತರುತ್ತೇವೆ ಎಂದರು.