ಸೋಲು ಮರೆತು ಕಾರ್ಯಕರ್ತರು ಪುಟಿದೇಳಬೇಕು

29MDK01
Published on

ಮಡಿಕೇರಿ:

ಬಿಜೆಪಿಗೆ ಸೋಲು ಮತ್ತು ಗೆಲುವು ಹೊಸದಲ್ಲ. ಕಳೆದು ಹೋಗಿದ್ದರ ಬಗ್ಗೆ ವಿಮರ್ಶೆ ಮಾಡುತ್ತಾ ಕೂರುವ ಬದಲು ಪಕ್ಷದ ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು. ಇಲ್ಲಿನ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕೇಂದ್ರ ಸರ್ಕಾರದ ೯ ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸ ಚುನಾವಣೆ ಸಂದರ್ಭದಲ್ಲಿ ಆಗಲಿಲ್ಲ. ಕೊಡಗಿನಲ್ಲಿ ಬಿಜೆಪಿ ಗೆಲವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್, ಜೆಡಿಎಸ್ ಕೂಡ ನಂಬಿತ್ತು. ಈ ಆತ್ಮವಿಶ್ವಾಸವೂ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ. ಈ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಬೇಕು. ಕೇವಲ ಮೋದಿ ಹೆಸರು ಹೇಳುವುದರಿಂದ ಮತ ಬರುವುದಿಲ್ಲ. ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಮತ್ತೊಮ್ಮೆ ಮೋದಿ ಪ್ರಧಾನಿ ಆದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಮರ್ಥವಾಗಿ ಉತ್ತರ ಕೊಡಬಹುದು ಎಂದರು.

ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಿಜೆಪಿ ಸೋತಿರಬಹುದು, ಸತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪುಟಿದೇಳಬೇಕು. ಆತ್ಮಸ್ಥೈರ್ಯದಿಂದ ಮುಂದಿನ ಚುನಾವಣೆಗಳನ್ನು ಎದುರಿಸಬೇಕು. ಕೊಡಗಿಗೆ ಬಿಜೆಪಿ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಯೂನಿವರ್ಸಿಟಿ, ಟ್ರಾಮಾ ಸೆಂಟರ್, ಎಂಜಿನಿಯರ್ ಕಾಲೇಜು ಎಲ್ಲವೂ ಕೊಟ್ಟಿದೆ. ಜಿಲ್ಲೆಗೆ ಇನ್ನು ಬರಲು ಏನು ಬಾಕಿ ಇದೆ ಎನ್ನುವ ಸ್ಥಿತಿ ಇಲ್ಲಿದೆ. ಆದರೂ ಸೋಲು ಯಾಕಾಯಿತು ಎನ್ನುವುದರ ಬಗ್ಗೆ ಅವಲೋಕನ ಆಗಬೇಕಿದೆ ಎಂದು ಹೇಳಿದರು.

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ರಾಜಕೀಯದಲ್ಲಿ ಸೋಲು, ಗೆಲುವು ಇರುವಂಥದ್ದೇ. ಇದರಿಂದ ಯಾರೂ ದೃತಿಗೆಡಬೇಕಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ವ್ಯಯಕ್ತಿಕ ವಿಷಯಗಳನ್ನು ಪಕ್ಷಕ್ಕೆ ವಿರುದ್ಧವಾಗಿ ತೆಗೆದುಕೊಳ್ಳಬಾರದು. ಮುಂಬರುವ ಸಹಕಾರಿ ಸಂಘದ, ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಿಂತ ಪಕ್ಷ ಪ್ರಮುಖ ಎಂದು ಎಲ್ಲರೂ ಕೆಲಸ ಮಾಡಬೇಕು. ಬಿಜೆಪಿ ಒಂದು ಕುಟುಂಬ ಇದ್ದಂತೆ. ಕುಟುಂಬದಲ್ಲಿ ಭಿನ್ನ ಧ್ವನಿ ಸಾಮಾನ್ಯ. ಇದನ್ನೆಲ್ಲಾ ಮಾಧ್ಯಮಗಳ ಎದುರು ತೆಗೆದುಕೊಂಡು ಹೋಗಬಾರದು. ಕಾಶ್ಮೀರದಲ್ಲಿ ೩೭೦ ಆರ್ಟಿಕಲ್ ತೆಗೆದಿರುವುದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮೋದಿ ಸರ್ಕಾರದ ದೊಡ್ಡ ಸಾಧನೆ. ಬಿಜೆಪಿಯಿಂದ ಆಗುತ್ತಿರುವ ಕೆಲಸಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗನ್ನು ಕಾಂಗ್ರೆಸ್ ಮುಕ್ತ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಈಗ ಫುಲ್‌ಸ್ಟಾಪ್ ಬಿದ್ದಿದೆ. ಕಳೆದ ಬಾರಿಗಿಂತ ಹೆಚ್ಚು ಓಟ್ ಎರಡು ಕ್ಷೇತ್ರಗಳಲ್ಲಿ ಬಂದರೂ ಪಕ್ಷಕ್ಕೆ ಸೋಲಾಯಿತು. ಇದಕ್ಕೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕಾರಣ. ಜೆಡಿಎಸ್ ಮತ್ತು ಎಸ್‌ಡಿಪಿಐ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟು ನೇರ ಹಣಾಹಣಿ ಸೃಷ್ಟಿಯಾಗಿದ್ದರಿಂದಲೂ ಸೋಲು ಅನುಭವಿಸಬೇಕಾಯಿತು. ಸೊಲು ಎಂದು ಮನೆಯಲ್ಲಿ ಕೂರಬಾರದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆ ತಿಳಿಸುವುದು ಅಗತ್ಯವಾಗಿದೆ. ದೇಶ ಮುಖ್ಯ ಎನ್ನುವ ನೆಲೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯದಲ್ಲಿ ಪುಕ್ಸಟ್ಟೆ ಸವಲತ್ತು ಹೆಚ್ಚಾಗುತ್ತಿದೆ. ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಕೊಡಲಾಗುತ್ತಿದೆ. ಇದನ್ನು ಜನರ ಗಮನಕ್ಕೆ ತರಬೇಕು ಎಂದರು.

ಮಾಜಿ ಸಚಿವ ಎಸ್.ಟಿ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನಗರ ಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖರಾದ ಅರುಣ್ ಭೀಮಯ್ಯ, ಮಾದಪ್ಪ, ಮನುಮಂಜುನಾಥ್, ಚಲನ್, ಮನು ರೈ, ಅಶ್ವಿನ್ ಮತ್ತಿತರರು ವೇದಿಕೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net