ಅಭಿವೃದ್ಧಿಗಾಗಿ ಹೊಸ ನಾಯಕತ್ವ ಬೇಕು: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ

DSC_0126
Published on

ಮಂಡ್ಯ: ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯಕ್ಕೆ ಹೊಸ ನಾಯಕತ್ವ ಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಹಾಗೂ ತಾಲೂಕಿನ ಬೇವಿನಹಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದರು. ಮಂಡ್ಯದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕಾಂಕ್ರೀಟ್ ರಸ್ತೆ ಆಗಿಲ್ಲ. ನನ್ನ ಕ್ಷೇತ್ರ ಚನ್ನಪಟ್ಟಣ ಎಷ್ಟು ಮುಖ್ಯವೋ ಅದೇ ರೀತಿ ಮಂಡ್ಯವೂ ಮುಖ್ಯ ಎಂದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ಮಾಡಿದರೂ ಹೆಚ್ಚು ದಿನ ಇರಲಿಲ್ಲ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ಇನ್ನು ದೇಶದಲ್ಲಿ ಗುಜರಾತ್‌ನ ಅಮುಲ್ ಡೇರಿ ಬೆಳೆದಿದೆ. ಕೆಎಂಎಫ್ ಅಮುಲ್ ಜತೆ ವಿಲೀನಾ ಮಾಡಿ ಎಂದು ಕೇಂದ್ರ ಸಚಿವ ಅಮಿತ್ ಷಾ ಅವರು ಹೇಳಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೂರ್ಖರು ಕಿತಾಪತಿ ಮಾಡಿದ್ದಾರೆ ಎಂದು ಟೀಕಿಸಿದರು.

2023ಕ್ಕೇ ಬಿಜೆಪಿ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದೆ. ಜಿಲ್ಲೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಮಂತ್ರಿಯಾಗಿದ್ದಾಗ ಕಬ್ಬಿಗೆ ಬೆಂಬಲ ಬೆಲೆ ಕೊಡಿಸಿದ್ದು ನಾನು. ಜಿಲ್ಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬರಬೇಕು. ಕಬ್ಬು ಮತ್ತು ಹಾಲು ಕ್ರಾಂತಿ ಮಂಡ್ಯದಲ್ಲಿ ಆಗುತ್ತಿದೆ. ರೈತರ ಸಮಸ್ಯೆಗಳನ್ನ ಕೇಳಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸಚಿವರನ್ನ ರೈತರ ಜತೆ ಮಾತನಾಡಿಸಿದ್ದೇವೆ. ರೈತರ ಪರವಾದ ಕಾಳಜಿ ಬಿಜೆಪಿಗೆ ಇದೆ. ಸಚ್ಚಿದಾನಂದ ಅವರನ್ನ ಬಿಜೆಪಿಗೆ ಕರೆತಂದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಎಂಎಲ್‌ಎ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗುತ್ತಿದೆ. ಮಾತ್ರವಲ್ಲದೆ ಬಿಜೆಪಿಯ ಬದಲಾವಣೆ ಅಲೆ ಎದ್ದಿದ್ದೆ. ಹಲವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಚಾಣಕ್ಯ ಅಮಿತ್ ಷಾ ಅವರು ಮಂಡ್ಯವನ್ನ ಗುಣಗಾನ ಮಾಡಿದ್ದಾರೆ. ಮುಂದಿನ ದಿನದಲ್ಲಿ ಯೋಗಿ ಆದಿತ್ಯನಾಥ್ ಅವರು ಕೂಡ ಬರುತ್ತಾರೆ. ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಬಿಜೆಪಿಯ ಶಾಸಕರನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸ ಮಾಡೋಣ. ಒಗ್ಗಟ್ಟಿನಿಂದ ನಾವು ಚುನಾವಣೆ ಗೆಲ್ಲೊಣ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಎಸ್.ಎಲ್.ಲಿಂಗರಾಜು, ರಾಮೇಗೌಡ, ಶ್ರೀಧರ್, ರಾಮಲಿಂಗಯ್ಯ ಇತರರಿದ್ದರು. ಇದೇ ವೇಳೆ 200ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net