

ಮಂಡ್ಯ: ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಪ್ರಾಧಾನ್ಯತೆ ಸಿಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇಂಡುವಾಳು ಸಚ್ಚಿದಾನಂದ ಅವರನ್ನು ಅಭಿನಂದಿಸಿ ಮಾತನಾಡಿ, ಬಿಜೆಪಿಗೆ ಪ್ರತಿ ಕಾರ್ಯಕರ್ತರು ಶಕ್ತಿಯಾಗಿ ನಿಂತಿದ್ದಾರೆ. ಪಕ್ಷದ ತತ್ವ, ಸಿದ್ಧಾಂತದ ಮೂಲಕ ಸಂಘಟನೆ ಹಾಗೂ ಕೆಲಸ ಮಾಡಬೇಕು. ಅಂತಹವರಿಗೆ ಪಕ್ಷವೂ ಶಕ್ತಿಯಾಗಿ ನಿಲ್ಲಲಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಇಂಡುವಾಳು ಸಚ್ಚಿದಾನಂದ ಅವರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕಿನಲ್ಲಿ ಪಕ್ಷ ಸಂಘಟಿಸಲಿದ್ದಾರೆ. ಅವರಿಗೆ ಮುಖಂಡರು, ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಬಿಜೆಪಿಯ ಪ್ರಾಬಲ್ಯ ಮೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಬಿಜೆಪಿಯ ತತ್ವ ಮತ್ತು ಸಿದ್ಧಾಂತವನ್ನು ಮೆಚ್ಚಿಕೊಂಡು ಪಕ್ಷ ಸೇರಿದ್ದೇನೆ. ನಾಯಕರ ಮಾರ್ಗದರ್ಶನ ಹಾಗೂ ಸೂಚನೆ ಜತೆಗೆ ಮುಖಂಡರ ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷ ಸಂಘಟನೆ ಮಾಡಲಾಗುವುದು. ಹೊಸಬರು ಮತ್ತು ಹಳಬರು ಎನ್ನುವ ಭೇದವಿಲ್ಲದೆ ಎಲ್ಲರೊಂದಿಗೆ ಸೇರಿ ಬಿಜೆಪಿಯನ್ನು ಸದೃಢಗೊಳಿಸೋಣ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ವಿವೇಕ್, ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್, ಡಾ.ಸದಾನಂದ ಇದ್ದರು.