

ಮಂಡ್ಯ: ನಾವು ಕಣ್ಣೀರು ಹಾಕಲ್ಲ, ಕಥೆಯನ್ನೂ ಹೇಳಲ್ಲ. ಕೆಲಸ ಮಾಡಿ ತೋರಿಸುತ್ತೇವೆ ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.
ತಾಲೂಕಿನ ಸಾತನೂರು ಬೆಟ್ಟದ ಕಂಬದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಕಸಬಾ ಮಹಾಶಕ್ತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಟ್ಟು ನೋಡಿ. 50 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಐದೇ ವರ್ಷಗಳಲ್ಲಿ ಮಾಡದಿದ್ದರೆ ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ.
ಮೈಸೂರು ಮಹಾರಾಜರ ಕಾಲದಲ್ಲಿ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದರು. ಅವರ ಕೊಡುಗೆಗಳು ವಿಶ್ವವೇ ಎದುರು ನೋಡುವಂತಹ ಆಡಳಿತ ಕೊಟ್ಟಿದ್ದರು. ಅಂತಹ ಸಾಧನೆಯನ್ನು ಯಾರೂ ಮಾಡಲಿಲ್ಲ. ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ರಾಮನಗರ ಹೇಗೆ ಅಭಿವೃದ್ಧಿ ಹೊಂದಿದೆ, ಕೈಗಾರಿಕೆ, ಕೃಷಿ, ಕೌಶಲ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ನಾನು ಮಂತ್ರಿಯಾಗಿ ಕೇವಲ ಮೂರೇ ವರ್ಷದ ಅನುಭವವಿದೆ. ನಿಮಗಿರುವಂತೆ ಹಲವಾರು ವರ್ಷಗಳ ರಾಜಕೀಯ ಅನುಭವ ನನಗಿಲ್ಲದಿದ್ದರೂ, ಯಾವ ರೀತಿ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ ಎಂಬುದನ್ನು ನೋಡಬಹುದಾಗಿದೆ. ಇಂತಹ ಅಭಿವೃದ್ಧಿ ಮಂಡ್ಯದಲ್ಲೂ ಆಗಬೇಕಿದೆ ಎಂದರು.
ನಮ್ಮನೆ ಹುಡುಗ ಎಂದು ಜಿಲ್ಲೆಯ ಜನತೆ ಆಶೀರ್ವಾದ ಮಾಡಿದರು. ಆದರೆ ಅವರಿಗೇನು ಕೊಟ್ಟಿರಿ, ನಮ್ಮ ಮನೆಯ ಸೊಸೆ, ಮೊಮ್ಮಗ, ಮಗ ಎಂದು ಕುಟುಂಬದವರೇ ರಾಜಕೀಯವಾಗಿ ಬರಬೇಕೇ?. ನಮ್ಮಲ್ಲಿ ಸೋನಿಯಾಗಾಂಧಿ ಕುಟುಂಬವೂ ಇಲ್ಲ, ದೇವೇಗೌಡರ ಕುಟುಂಬವೂ ಇಲ್ಲ. ಇದು ಜನರ ಆಶೋತ್ತರಗಳನ್ನು ಈಡೇರಿಸುವ ಪಕ್ಷ. ಇಂತಹ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಡಾ.ಇಂದ್ರೇಶ್, ಭೀಮೇಶ್, ಸುಜಾತ ರಮೇಶ್ ಇತರರಿದ್ದರು.