ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರ ಕಾರ್ಯಾಲಯದಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಸದಸ್ಯತಾ ಅಭಿಯಾನದ ಮೊದಲ ಹಂತವು ಸೆ. 25ರಂದು ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಮಹಾ ಸಂಪರ್ಕ ಅಭಿಯಾನ ಏರ್ಪಡಿಸಲಾಗಿದೆ.
ಪಕ್ಷದ ಪಾಲಿಕೆ ಸದಸ್ಯರು, ಜಿಲ್ಲಾ ಹಾಗೂ ಮಂಡಳ ಮೋರ್ಚಾಗಳ ಪದಾಧಿಕಾರಿಗಳು ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಂಡಲವಾರು ಅಧ್ಯಕ್ಷರು ನೀಡಿದ ವರದಿಯನ್ನು ಜಿಲ್ಲಾಧ್ಯಕ್ಷರು ಪಡೆದರು. ಪ್ರತಿಮಂಡಲಗಳಲ್ಲಿ ಹೆಚ್ಚೆಚ್ಚು ಸದಸ್ಯತ್ವ ಮಾಡಬೇಕೆಂದು ಸೂಚಿಸಿದರು.
ಮಹಾನಗರ ಅಭಿಯಾನದ ಸಂಚಾಲಕ ನಾರಾಯಣ ಜರತಾರಘರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಮಹೇಂದ್ರ ಕೌತಾಳ, ಮಂಡಲ ಅಧ್ಯಕ್ಷರಾದ ಸಂತೋಷ ಚೌಹಾನ್, ಪ್ರಭು ನವಲಗುಂದಮಠ, ಸುನಿಲ್ ಮೋರೆ, ವಕ್ತಾರರಾದ ರವಿ ನಾಯಕ, ರಾಜು ರ್ಜತಾರಘರ್, ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ಸೀಮಾ ಲದ್ವಾ, ಅಕ್ಕಮಹಾದೇವಿ ಹೆಗಡೆ, ಸಂಗೀತಾ ಬದ್ದಿ, ಸುನೀತಾ ಚವಾನ್ ಮೊದಲಾದವರು ಉಪಸ್ಥಿತರಿದ್ದರು.