

ಶಿವಮೊಗ್ಗ: ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಬ್ಬೆ ಹಾಕಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಅನಂತಕುಮಾರ್ ಹೆಗ್ಡೆ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮುಂತಾದವರು ಈಗ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಅನ್ಯಕೋಮಿನವರು ಕೊಲೆ ಮಾಡಿದ್ದಾರೆಂದು ಮುಖಂಡರು ಆರೋಪಿಸಿದ್ದರು. ಉತ್ತರಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿ ಕೋಮುಗಲಭೆ ಸೃಷ್ಟಿಸಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಕೇವಲ ಉತ್ತರಕನ್ನಡ ಮಾತ್ರವಲ್ಲದೇ ಇತರ ಜಿಲ್ಲೆಗಳಲ್ಲೂ ಕೋಮುಭಾವನೆ ಕಿಚ್ಚಿಗೆ ಕಾರಣರಾಗಿದ್ದರು. ಈಗ ಸಿಬಿಐ ತನಿಖೆ ನಡೆಸಿ ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ. ಆತನದ್ದು ಆಕಸ್ಮಿಕ ಸಾವೆಂದು ವರದಿ ಉಲ್ಲೇಖಿಸಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯವರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅದೇ ರೀತಿ ಪ್ರವೀಣ್ ನೆಟ್ಟಾರು ಹಾಗೂ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಗಲಾಟೆಗಳು ನಡೆದಿದ್ದವು. ರಾಜ್ಯ ಸರ್ಕಾರ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿಗೆ ಸರ್ಕಾರಿ ಕೆಲಸ ನೀಡಿದೆ. ಆದರೆ, ಹರ್ಷನ ಕುಟುಂಬಕ್ಕೆ ಕೆಲಸ ನೀಡಿಲ್ಲ. ಏಕೆಂದರೆ ದಕ್ಷಿಣ ಕನ್ನಡದಲ್ಲಿ ಪೂಜಾರಿ ಸಮುದಾಯದ ಮತಗಳು ಹೆಚ್ಚಿವೆ. ಈಶ್ವರಪ್ಪ ಅವರು ಹರ್ಷನ ಕೊಲೆ ಪ್ರಕರಣವನ್ನು ಅತಿ ದೊಡ್ಡದಾಗಿ ಬಿಂಬಿಸಿದ್ದರು. ಆತ ಕೂಡ ಹಿಂದೂ ಅಲ್ಲವೇ? ಅವರ ಕುಟುಂಬಕ್ಕೆ ಏಕೆ ಕೆಲಸ ಕೊಡಲಿಲ್ಲ? ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ದೇಶದ ಆರ್ಥಿಕ ಪರಿಸ್ಥಿತಿಯೇ ದಿವಾಳಿ: ದೇಶದ ಆರ್ಥಿಕ ಪರಿಸ್ಥಿತಿಯೇ ದಿವಾಳಿಯಾಗಿದೆ. ಆರ್‌ಎಸ್‌ಎಸ್ ಪ್ರಮುಖರೇ ಈ ದೇಶ ಬಡತನದಲ್ಲಿದೆ. ನಿರುದ್ಯೋಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ಇನ್ನಾದರೂ ದೇಶ ಆರ್ಥಿಕವಾಗಿ ಸುಭದ್ರವಾಗಿದೆ ಎಂಬ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದ ಅವರು, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ನಾಲಗೆಯನ್ನು ಹರಿಬಿಡುವುದು ಮತ್ತು ರಾಜಕಾರಣಕ್ಕಾಗಿ ರಾಜ್ಯದ ಜನರನ್ನು ಮರಳು ಮಾಡುವುದನ್ನು ನಿಲ್ಲಿಸಬೇಕು ಎಂದರು.