

ವಿಜಯಪುರ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹೋರಾಟ ನಡೆಸದೆ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಕೇಳಲಾಗದ ರಾಜ್ಯ ಬಿಜೆಪಿ ನಾಯಕರು ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎಂಬಂತೆ ಜನಾಕ್ರೋಶ ರ‌್ಯಾಲಿ ನಡೆಸಿದ್ದಾರೆಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಲೇವಡಿ ಮಾಡಿದರು.
ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ ಖಾಲಿ ಇದ್ದಾರೆ. ಹೀಗಾಗಿ ಜನಾಕ್ರೋಶ ರ‌್ಯಾಲಿ ನಡೆಸಿದ್ದಾರೆ. ಇವರಿಗೆ ತಾಕತ್ ಇದ್ದರೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲಿ ನೋಡೋಣ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಯಾಗಿ ಸವಾಲೆಸೆದರು.
ಸುಳ್ಳು ಹೇಳುವುದರಲ್ಲಿ ಬಿಜೆಪಿರು ನಿಸ್ಸೀಮರು. ದೇಶದ ಸ್ವಾತಂತ್ರಾೃ ನಂತರ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೂ ದೇಶದ ಸಾಲ ಕೇವಲ 53 ಲಕ್ಷ ಕೋಟಿ ಇತ್ತು. ಇದೀಗ ಆ ಸಾಲದ ಮೊತ್ತ 140 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅದಲ್ಲದೇ ಇದೀಗ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಅಡುಗೆ ಅನಿಲ ದರ ರೂ.50 ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡಿಸೆಲ್ ಮೇಲೆ ಎರಡೆರಡು ರೂಪಾಯಿ ಸುಂಕ ವಿಧಿಸಿದೆ. ಅದು ಜನರಿಗೆ ಕಡಿಮೆ ಮಾಡಬೇಕಿತ್ತು. ಆದರೆ, ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತಿದೆ. ಹೀಗಾಗಿ ಬಿಜೆಪಿಗರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿ. ರಾಜ್ಯದ ಸಂಸದರು ಹಾಗೂ ಕೇಂದ್ರದ ಮಂತ್ರಿಗಳು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನಕ್ಕಾಗಿ ಪ್ರಧಾನಿ ಮೋದಿ ಮುಂದೆ ಬೇಡಿಕೆ ಇಡುವ ಧೈರ್ಯ ಮಾಡಬೇಕೆಂದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಿಂತಿವೆ ಎಂಬುದು ಶುದ್ಧ ಸುಳ್ಳು. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಸಾಕಷ್ಟು ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ ಖರೀದಿಸಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ 1031 ಬಸ್‌ಗಳನ್ನು ಹೊಸದಾಗಿ ಖರೀದಿಸಲಾಗಿದೆ. ಇನ್ನೂ 700-800 ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಈ ಹಿಂದೆ ಖಾಲಿಯಾಗಿದ್ದ 14 ಸಾವಿರ ಹುದ್ದೆಗಳಿಗೆ ನೇಮಕಾತಿಯನ್ನೇ ಮಾಡಿಕೊಂಡಿರಲಿಲ್ಲ. ನಮ್ಮ ಸರ್ಕಾರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದೆ ಎಂದರು.