ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ

Sharanprakash Patil
Published on

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲದ ಬಿಜೆಪಿ ನಾಯಕರು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎನ್ನುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಸಂಜೆ ಮಾತನಾಡಿ, ಅಕಾರದಲ್ಲಿದ್ದಾಗ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದರಿಂದ ಜನ ಕಾಂಗ್ರೆಸ್ ಮೇಲೆ ನಂಬಿಕೆಯಿಟ್ಟು ಗೆಲ್ಲಿಸಿದ್ದಾರೆ. ನಮ್ಮ ಮೇಲೆ ಜನರಿಗೆ ದೊಡ್ಡ ನಿರೀಕ್ಷೆ ಇರುವುದು ಗೊತ್ತಿದೆ. ನಾವು ಆರೋಪಗಳಿಗೆ ತಲೆ ಕೆಡಿಸಿಕೊಳ್ಳದೆ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇವೆ.
ನಮ್ಮ ಶಾಸಕರು, ಸಚಿವರಲ್ಲಿ ಅಸಮಾಧಾನವಿಲ್ಲ. ಡಿ.ಕೆ.ಶಿವಕುಮಾರ ಶಾಸಕರು ಬಹಿರಂಗವಾಗಿ ಮಾತನಾಡದಂತೆ ಯಾವ ಕಾರಣಕ್ಕೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಡಿಸಿಎಂ ಬೆಳಗಾವಿಗೆ ಹೋದಾಗ ಸಚಿವರು ಇರದಿರುವುದು ಅಸಮಾಧಾನವಲ್ಲ. ಸತೀಶ ಜಾರಕಿಹೊಳೆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ.
ನನ್ನ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರು ಎಳೆದು ತರಲಾಗುತ್ತಿದೆ. ಅದನ್ನು ಮೃತನ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪರಿಚಯವಿಲ್ಲ. ಬಿಜೆಪಿಯವರು ನನ್ನ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದಿಸುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಇತರ ಜಿಲ್ಲೆಗಳಿಗೆ ಇರದ ಪಂಪ್‌ಸೆಟ್‌ಗಳಿಗೆ 7 ಗಂಟೆ ಮೂರು ೇಸ್ ವಿದ್ಯುತ್ ಪೂರೈಕೆಗೆ ಸೂಚಿಸಿದ್ದು ವಿಶೇಷ ಪ್ರಕರಣವಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಇರುವುದು ಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಬಸನಗೌಡ ದದ್ದಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net