

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಮಾನ್ಯತೆ ನೀಡಲು ನಿಗದಿ ಮಾಡಿರುವ ಶುಲ್ಕ ನಾಗರಿಕರಿಗೆ ಭಾರಿ ಹೊರೆಯಾಗಲಿದೆ. ಶುಲ್ಕದಲ್ಲಿ ಕಡಿತಗೊಳಿಸಿ ಜನಸ್ನೇಹಿ ರೀತಿ ಜಾರಿಗೊಳಿಸದಿದ್ದಲ್ಲಿ ಯೋಜನೆಯೇ ವಿಫಲವಾಗಲಿದೆ ಎಂದು ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ ಎಚ್ಚರಿಸಿದ್ದಾರೆ.
ಸರ್ಕಾರ ತಿಳಿಸಿರುವಂತೆ ಸ್ವತ್ತುಗಳಿಗೆ ಮಾರ್ಗಸೂಚಿ ದರದ ಶೇ.5 ಶುಲ್ಕ ಪಾವತಿಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಅಂದರೆ, ಏಕನಿವೇಶನಕ್ಕೆ ಅರ್ಜಿ ಸಲ್ಲಿಸುವ ವೇಳೆ 30/40 ಅಡಿ ವಿಸ್ತೀರ್ಣದ ಸೈಟ್‌ದಾರರು ಆ ನಿವೇಶನಕ್ಕೆ 3 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇದರ ಜತೆಗೆ ಭೂ ಪರಿವರ್ತನೆ ಶುಲ್ಕ, ಸುಧಾರಣಾ ಶುಲ್ಕ ಹಾಗೂ ಇತರ ವೆಚ್ಚ ಭರಿಸಬೇಕಾದ ಸಾಧ್ಯತೆ ಇದೆ. ಈ ಅಂಶಗಳನ್ನು ಪೂರ್ಣವಾಗಿ ಜನರಿಗೆ ತಿಳಿಸದೆ ಮನಸೋಇಚ್ಛೆ ಸರ್ಕಾರ ಶುಲ್ಕ ನಿಗದಿ ಮಾಡಿದೆ. ಈ ನಿರ್ಧಾರವನ್ನು ಮರುಪರಿಶೀಲಿಸಿ ಬಡವರಿಗೆ ಮಾತ್ರ ಕಡಿಮೆ ಶುಲ್ಕ ನಿಗದಿ ಮಾಡಿ ಎ ಖಾತಾ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶುಲ್ಕ ನಿಗದಿಯಲ್ಲಿ ತಾರತಮ್ಯ:
ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ)ದ ಕಂದಾಯ ಸೈಟ್‌ಗಳ ಏಕ ನಿವೇಶನ ಮಂಜೂರಾತಿಗೆ ಪ್ರತಿ ಒಂದು ಚದರ ಅಡಿಗೆ 250 ರೂ.ನಿಂದ 300 ರೂ. ನಿಗದಿ ಮಾಡಲಾಗಿದೆ. ಆದರೆ, ಬಿಡಿಎಯಿಂದ ಭೂ ಪರಿವರ್ತನೆ ಆಗಿರುವ ಸ್ವತ್ತುಗಳಿಗೆ ಚದರ ಅಡಿಗೆ 24.60 ರೂ. ಮಾತ್ರ ನಿಗದಿಪಡಿಸಲಾಗಿದೆ. ಸದ್ಯ ಬಡವರು ಕಂದಾಯ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಅವರೆಲ್ಲರೂ ದೊಡ್ಡ ಮೊತ್ತವನ್ನು ಪಾವತಿಸಲು ಶಕ್ತರಾಗಿರುವುದಿಲ್ಲ. ಬದಲಾಗಿ ಸರ್ಕಾರದ ತೀರ್ಮಾನ ಶ್ರೀಮಂತರಿಗೆ ಮಾತ್ರ ಅನುಕೂಲ ಮಾಡಿಕೊಡಲಿದೆ. ಹಾಗಾಗಿ ಬಡವರಿಗೆ ಶುಲ್ಕ ಕಡಿತ ಮಾಡಬೇಕು ಎಂದು ಪದ್ಮನಾಭರೆಡ್ಡಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೈಲಾ ಉಲ್ಲಂಘನೆ ಕಟ್ಟಡಗಳಿಗಿಲ್ಲ ಖಾತಾ?:
ಬಿ ಖಾತೆ ಹೊಂದಿರುವ ಬಹುಮಹಡಿ ಪ್ಲಾಟ್‌ಗಳು ಅಥವಾ ಒಂದೇ ಪ್ಲಾಟ್‌ನಲ್ಲಿ ಬಹು ಘಟಕಗಳನ್ನು ನಿರ್ಮಿಸಿದ್ದಲ್ಲಿ ಏಕನಿವೇಶನದ ಶುಲ್ಕ, ಭೂ ಪರಿವರ್ತನೆ ಶುಲ್ಕ, ಪ್ರೊಸಿಸಿಂಗ್ ಫೀ ಪಾವತಿಸಿದ ನಂತರ ಅಂತಹ ಕಟ್ಟಡಗಳು ಬೈಲಾ ಪ್ರಕಾರ ನಿರ್ಮಿಸಿದ್ದಲ್ಲಿ ದಂಡ ಶುಲ್ಕ ವಿಧಿಸಿ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಬೇಕಾಗುತ್ತದೆ. ಆ ಬಳಿಕವೇ ಪ್ರತೀ ಫ್ಲ್ಯಾಟ್ ಮಾಲೀಕರಿಗೆ ಎ ಖಾತಾ ಸೌಲಭ್ಯ ವಿತರಿಸುವ ನಿಯಮ ಇದೆ. ಆದರೆ, ಬೈಲಾಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿದ್ದಲ್ಲಿ ಆಗ ಎ ಖಾತಾ ವಿತರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ವಿಚಾರದಲ್ಲಿ ಸರ್ಕಾರವೇ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದು ಮಾಜಿ ಕಾರ್ಪೊರೇಟರ್‌ಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.