ವಕ್ಫ್ ಆಸ್ತಿ ಹಗರಣ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ; ಬೇಸತ್ತ ಮಾಣಿಪ್ಪಾಡಿಯಿಂದ ಸವಲತ್ತು ಹಿಂದಿರುಗಿಸಲು ನಿರ್ಧಾರ

Anwar Maniipppady BJP
Published on

ಮಂಗಳೂರು: ವಕ್ಫ್ ಆಸ್ತಿ ಕಬಳಿಕೆ ಹಗರಣದ ಕುರಿತಂತೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನಾಗಿದ್ದ ವೇಳೆ ಸಲ್ಲಿಸಿದ್ದ ವರದಿಯ ಕುರಿತಂತೆ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮತ್ತು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕುರಿತಂತೆ ಅನುಸರಿಸುತ್ತಿರುವ ನೀತಿಯನ್ನು ಖಂಡಿಸಿ ಪ್ರತಿಭಟನಾ ರೂಪವಾಗಿ ಗನ್‌ಮ್ಯಾನ್ ಭದ್ರತೆಯನ್ನು ವಾಪಾಸ್ ಮಾಡಲು ಹಾಗೂ ಮಾಜಿ ಅಧ್ಯಕ್ಷನ ನೆಲೆಯಲ್ಲಿ ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸವಲತ್ತುಗಳನ್ನು ತಿರಸ್ಕರಿಸಲು ನಿರ್ಧರಿಸಿರುವುದಾಗಿ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಗೆ ಸಂಬಂಧಿಸಿದ 2.30 ಲಕ್ಷ ಕೋಟಿ ರೂ. ಮೊತ್ತದ ದೇಶದಲ್ಲೇ ದೊಡ್ಡ ಹಗರಣ ರಾಜ್ಯದಲ್ಲಿ ನಡೆದಿದೆ. ಈ ಕುರಿತಂತೆ ಸಮಗ್ರ ದಾಖಲೆಯೊಂದಿಗೆ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದರೂ, ಇನ್ನೂ ಕ್ರಮಕೈಗೊಳ್ಳಲಾಗಿಲ್ಲ.

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ, ನ್ಯಾಯಾಲಯದ ನಿರ್ದೇಶನವಿದ್ದರೂ, ಅದು ಸಾಧ್ಯವಾಗಿಲ್ಲ. ಇನ್ನೊಂದೆಡೆ ಸಂವಿಧಾನಾತ್ಮಕವಾಗಿ ಅಲ್ಪಸಂಖ್ಯಾತರ ನೆಲೆಯಲ್ಲಿ ಸಿಕ್ಕಿರುವ ಹಕ್ಕುಗಳನ್ನು ದಮನ ಮಾಡುವ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿದೆ. ಪ್ರಧಾನಿ ಮೋದಿಯವರ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎನ್ನುವ ಘೋಷಣೆಗೆ ರಾಜ್ಯದಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ. ರಾಜ್ಯದ ವಿವಿಧೆಡೆ ವಕ್ಫ್ ಆಸ್ತಿಗಳನ್ನು ಹಿಂದಕ್ಕೆ ಪಡೆಯುವ ಪ್ರಯತ್ನವೂ ಸರ್ಕಾರದಿಂದ ನಡೆಯುತ್ತಿದೆ ಎಂದವರು ಆರೋಪಿಸಿದರು.

ವಕ್ಫ್ ಹಗರಣ ಬಯಲಿಗೆಳೆದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ಮೂರು ಬಾರಿ ನನ್ನ ಮೇಲೆ ಹಲ್ಲೆಗಳು ನಡೆದಿವೆ. ಆದರೂ ಹೋರಾಟ ಬಿಟ್ಟಿಲ್ಲ. ಹೋರಾಟದಿಂದ ವಿಮುಖವಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರಿಂದಲೂ ಒತ್ತಡ ಬಂದಿತ್ತು. ಈ ಕುರಿತು ಆ ಸಂದರ್ಭದಲ್ಲೇ ಅವರಿಗೆ ಸರಿಯಾದ ಉತ್ತರ ನೀಡಿದ್ದೆ. ಇದೀಗ ಕೆಲ ತಿಂಗಳ ಹಿಂದೆ ಮತ್ತೊಂದು ರೀತಿಯಲ್ಲಿ ಆಮಿಷ ಒಡ್ಡುವ ಪ್ರಯತ್ನ ಸರ್ಕಾರದ ಮಟ್ಟದಿಂದ ನಡೆದಿದೆ. ಅದನ್ನೂ ತಿರಸ್ಕರಿಸಿ, ಇದೀಗ ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನಾದರೂ ಸರ್ಕಾರ ಕ್ರಮಕ್ಕೆ ಮುಂದಾಗುತ್ತಾ ಎಂದು ಕಾದುನೋಡುವೆ ಎಂದವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net