ಬಿಜೆಪಿಗೆ ಒಲಿದ ಕುಕನೂರು ತಾಪಂ ಅಧ್ಯಕ್ಷ ಗಾದಿ

160720 Kukanuru TP BJP President
ಕುಕನೂರಿನ ಎಪಿಎಂಸಿ ಕಚೇರಿಯಲ್ಲಿ ನೂತನ ಕುಕನೂರು ತಾಲೂಕಿನ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಗುರುವಾರ ಜರುಗಿತು.
Published on

ಅಧ್ಯಕ್ಷರಾಗಿ ಜಗನ್ನಾಥಗೌಡ, ಉಪಾಧ್ಯಕ್ಷೆಯಾಗಿ ದುರಗವ್ವ ಗಾದಿ ಅವಿರೋಧ ಆಯ್ಕೆ

ಕುಕನೂರು: ಸ್ಥಳೀಯ ನೂತನ ತಾಪಂನ ಅಧ್ಯಕ್ಷರಾಗಿ ಶಿರೂರು ಕ್ಷೇತ್ರದ ಜಗನ್ನಾಥಗೌಡ, ಉಪಾಧ್ಯಕ್ಷೆಯಾಗಿ ಕುದರಿಮೋತಿ ತಾಪಂ ಕ್ಷೇತ್ರದ ದುರುಗವ್ವ ಗಾದಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಗುರುವಾರ ನೂತನ ಕುಕನೂರು ತಾಪಂನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಜರುಗಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ, ನಾಮಪತ್ರ ಪರಿಶೀಲನೆ ನಂತರ ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣ ಕನಕರೆಡ್ಡಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದುರುಗವ್ವ ಗಾದಿ ಅವರ ಹೆಸರನ್ನು ಘೋಷಿಸಿದರು. ತಾಲೂಕಿನ ಒಟ್ಟು 11 ತಾಪಂ ಸದಸ್ಯರಲ್ಲಿ 7 ಜನ ಆಯ್ಕೆ ವೇಳೆ ಹಾಜರಿದ್ದರು.

ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಚುನಾವಣೆ ನಂತರ ಪಕ್ಷಾತೀತವಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡುವ ಭರವಸೆ ನೀಡಿದರು. ಅಲ್ಲದೆ ಕುಕನೂರು ತಾಲೂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿರುವುದು ಹೆಮ್ಮೆ ಸಂಗತಿ ಎಂದರು. ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಜಾಗದ ಕೊರತೆ ಇದ್ದು, ಸರ್ಕಾರಕ್ಕೆ ಭೂಮಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕಚೇರಿ ಆರಂಭ: ತಾಪಂ ಕಚೇರಿಯನ್ನು ಯಾವುದಾದರು ಕಟ್ಟಡದಲ್ಲಿ ಶೀಘ್ರ ಆರಂಭ ಮಾಡಲಾಗುವುದು. ಯಲಬುರ್ಗಾ ಇಒ ಅವರೇ ಕುಕನೂರಿನ ತಾಪಂ ಕಾರ್ಯ ಸಹ ನೋಡಿಕೊಳ್ಳುತ್ತಾರೆ ಎಂದು ಉಪವಿಭಾಗಾಧಿಕಾರಿ ನಾರಾಯಣ ಕನಕರೆಡ್ಡಿ ತಿಳಿಸಿದರು. ತಾಪಂ ಇಒ ಜಯರಾಮ ಚವ್ಹಾಣ, ತಹಸೀಲ್ದಾರ್ ಶ್ರೀಶೈಲತಳವಾರ, ಸಿಪಿಐ ನಾಗರೆಡ್ಡಿ, ತಾಪಂ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net