

ಕನಕಗಿರಿ: ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಬಿಜೆಪಿಯು ಅಲ್ಪಸಂಖ್ಯಾತರನ್ನು ಭಯೋತ್ಪಾದಕರಂತೆ ಕಾಣುತ್ತಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬರ್‌ಸಾಬ್ ಆರೋಪಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಹಿಡಿದಿದ್ದು, ಹಗರಣಗಳಲ್ಲಿಯೇ ಕಾಲ ಕಳೆದಿದೆ. ಬಿಜೆಪಿ ಕೋಮುವಾದ ಬಿತ್ತುತ್ತಿದೆ ಎಂದರು.
ಐದು ವರ್ಷ ರಾಜ್ಯವನ್ನಾಳಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದವರ ಏಳಿಗೆಗಾಗಿ ಶ್ರಮಿಸಿದೆ. ಅಲ್ಪಸಂಖ್ಯಾತರಾದ ಮುಸ್ಲಿಮರಿಗಾಗಿ ಶಾದಿಭಾಗ್ಯ ಸೇರಿ ಹಲವು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಧರ್ಮ ದಂಗಲ್‌ಗೆ ಕಾರಣವಾಗಿರುವ ಬಿಜೆಪಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದ ಅವರು, ಗಣಿಗಾರಿಕೆ ಮೂಲಕ ಬಳ್ಳಾರಿಯನ್ನು ಮಾರಾಟ ಮಾಡಿ ಇದೀಗ ಗಂಗಾವತಿ ನಗರಕ್ಕೆ ಬಂದಿರುವ ಜನಾರ್ದನ ರೆಡ್ಡಿ ಜನರನ್ನು ಮಾರಾಟ ಮಾಡುತ್ತಾನೆ. ಹೀಗಾಗಿ ಸಾರ್ವಜನಿಕರು ಎಚ್ಚರದಿಂದರಬೇಕು ಎಂದರು.
ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯ ಸರ್ವಾಧಿಕಾರ ಧೋರಣೆಗೆ ಮುಸ್ಲಿಮರು ತತ್ತರಿಸಿದ್ದಾರೆ. ಹಿಂದು, ಮುಸ್ಲಿಂ ಜನರು ರಾಜ್ಯದಲ್ಲಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಆದರೆ, ಬಿಜೆಪಿಯು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಚುನಾವಣೆಗೆ ಹೊರಟಿದೆ ಎಂದು ದೂರಿದರು.
ಅಲ್ಪಸಂಖ್ಯಾತ ಘಟಕದ ರಾಜ್ಯ ಉಸ್ತುವಾರಿ ಜಿನಾಲ್ ಎನ್.ಗಾಲ್, ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ್, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪ್ರಮುಖರಾದ ಶರಣೇಗೌಡ, ಅನಿಲ್ ಬಿಜ್ಜಳ, ಕಂಠಿರಂಗ ನಾಯಕ, ಹೊನ್ನೂರ್ ಸಾಬ್ ಉಪ್ಪು ಇತರರಿದ್ದರು.