ಇಡೀ ದೇಶ ಭಯಮುಕ್ತಗೊಳಿಸುವುದು ಬಿಜೆಪಿಗೆ ಗೊತ್ತು

Amit Sha New 007
Published on

ಹುಬ್ಬಳ್ಳಿ : ‘ಬಾಂಬ್ ಸ್ಪೋಟವನ್ನು ಸಿಲಿಂಡರ್ ಸ್ಫೋಟ ಎನ್ನುವ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ವೈಯಕ್ತಿಕ ಎನ್ನುವ, ಮತಬ್ಯಾಂಕ್​ಗಾಗಿ ತುಷ್ಟೀಕರಣ ಮಾಡುವ ಕಾಂಗ್ರೆಸ್​ಗೆ ರಾಜ್ಯವನ್ನು ಶಾಂತವಾಗಿ ಇಡಲು ಆಗದಿದ್ದರೆ ಅಧಿಕಾರದಿಂದ ತೊಲಗಲಿ. ನಮಗೆ ಇಡೀ ದೇಶವನ್ನು ಭಯಮುಕ್ತ ಹಾಗೂ ಶಾಂತಿಯುತವಾಗಿ ಹೇಗೆ ಇಡಬೇಕು ಎಂಬುದು ಗೊತ್ತಿದೆ.’

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಎಚ್ಚರಿಕೆಯ ಮಾತುಗಳಿವು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಚುನಾವಣೆ ಪ್ರಚಾರ ಬಹಿರಂಗ ಸಭೆ ಹಾಗೂ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಅವರು ಮಾತನಾಡಿದರು.

70 ವರ್ಷದಿಂದ ಮತಬ್ಯಾಂಕ್​ಗಾಗಿ ಒಂದು ಕೋಮಿನ ಜನರನ್ನು ಓಲೈಕೆ ಮಾಡುತ್ತ ಬಂದಿರುವ ಕಾಂಗ್ರೆಸ್​ನವರ ರಾಜಕಾರಣವನ್ನು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸಮಾಪ್ತಿಗೊಳಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದಿಂದ ನುಸುಳಿ ಬರುತ್ತಿದ್ದ ಭಯೋತ್ಪಾದಕರಿಗೆ ಶಾಸ್ತಿ ಮಾಡಿದ್ದೇವೆ. ನರೇಂದ್ರ ಮೋದಿ ಪ್ರಧಾನಿಯಾದರೆ ಭಯೋತ್ಪಾದನೆ ಮುಕ್ತ ಭಾರತ ನಿರ್ವಣಗೊಳ್ಳುತ್ತದೆ. ದೇಶ ವಿಶ್ವದ 3ನೇ ಆರ್ಥಿಕಶಕ್ತಿಯಾಗುತ್ತದೆ. ಚಂದ್ರಯಾನ, ಮಂಗಳಯಾನ, ಆದಿತ್ಯಯಾನಗಳು ನಡೆಯುತ್ತವೆ. ಕಾಶ್ಮೀರ ಮತ್ತು ನಕ್ಸಲ್​ವಾದ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದರು.

12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೊ ಅಥವಾ 25 ಪೈಸೆಯಷ್ಟೂ ಭ್ರಷ್ಟಾಚಾರದ ಆರೋಪ ಇರದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೋ ಎಂಬುದನ್ನು ಮತದಾರರು ನಿರ್ಧರಿಸಬೇಕು. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬೇಸಿಗೆ ರಜೆ ಕಳೆಯಲು ವಿದೇಶಕ್ಕೆ ಹಾರಿದರೆ, ನರೇಂದ್ರ ಮೋದಿ ವರ್ಷವಿಡೀ ಕೆಲಸ ಮಾಡುತ್ತಾರೆ. ದೀಪಾವಳಿಯನ್ನು ಸೈನಿಕರ ಜತೆಗೆ ಆಚರಿಸುತ್ತಾರೆ. ಇಂಥವರು ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ ಎಂದು ಕೋರಿದರು.

70 ವರ್ಷದಿಂದ ರಾಮಮಂದಿರ ನಿರ್ವಣವನ್ನು ಕಾಂಗ್ರೆಸ್ ತಡೆದಿತ್ತು. ಮೋದಿ ಪ್ರಧಾನಿಯಾದ ನಂತರ ಮಂದಿರ ನಿರ್ವಣಕ್ಕೆ ಶಂಕುಸ್ಥಾಪನೆ ಮಾಡಿ, ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆಯನ್ನೂ ಮಾಡಲಾಯಿತು. ಈ ಸಮಾರಂಭಕ್ಕೆ ಆಮಂತ್ರಣ ನೀಡಿದರೂ ಅಲ್ಪಸಂಖ್ಯಾತರ ಮತ ಕೈ ತಪ್ಪೀತು ಎಂಬ ಹೆದರಿಕೆಯಿಂದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪಾಲ್ಗೊಳ್ಳಲಿಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಇತರರು ಇದ್ದರು.

ಬಾಕ್ಸ್..............

ಪ್ರಜ್ವಲ್ ಪಲಾಯನ ಮಾಡುವಾಗ ಏಕೆ ಸುಮ್ಮನಿದ್ದಿರಿ?

ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್​ಡ್ರೖೆವ್ ಹೇಗೆ ಬಹಿರಂಗಗೊಂಡಿತು? ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೊದಲೇ ಗೊತ್ತಿತ್ತೆ ಎಂದು ಪ್ರಶ್ನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಗರಣದ ಬಗ್ಗೆ ತನಿಖೆ ನಡೆಸಿ, ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ರಾಜ್ಯದಿಂದ ಪಲಾಯನ ಮಾಡುವಾಗ ಕಾಂಗ್ರೆಸ್ ಸರ್ಕಾರ ಏಕೆ ಸುಮ್ಮನೆ ಕುಳಿತಿತ್ತು? ಪ್ರಜ್ವಲ್ ರೇವಣ್ಣಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇಂತಹ ಅತ್ಯಾಚಾರವನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.

ಬಾಕ್ಸ್

ಜಗಳ ಶುರುವಾಗಿದೆ...

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯೆ ಜಗಳ ಪ್ರಾರಂಭಗೊಂಡಿದೆ. ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಅಮಿತ್ ಷಾ ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಎನ್​ಡಿಆರ್​ಎಫ್ ಹಣ ನೀಡಲು ಮೊದಲೇ ನಿರ್ಧರಿಸಿತ್ತು. ಚುನಾವಣೆ ಆಯೋಗ ಅನುಮತಿ ನೀಡಿದ ನಂತರ ಬಿಡುಗಡೆಗೊಳಿಸಿದೆ. ಆದರೆ, ಕಾಂಗ್ರೆಸ್​ನವರು ತಮ್ಮ ಹೋರಾಟದಿಂದಲೇ ಕೇಂದ್ರ ಹಣ ನೀಡಿದೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net