

ಗಂಗೊಳ್ಳಿ: ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ಅಧಿಕಾರದಲ್ಲಿರುವ ಬಿಜೆಪಿ ರಾಜಕೀಯವಾಗಿ ಮುಂಚೂಣಿಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಎಲ್ಲ ವರ್ಗದ ಜನರಿಗೆ ಮುಟ್ಟಿಸುವ ಮೂಲಕ ತಳ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಹೇಳಿದರು.
ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಬಿಜೆಪಿ ಬೈಂದೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಏನೆಲ್ಲ ಭರವಸೆಗಳನ್ನು ಕೊಟ್ಟಿದ್ದೇನೊ ಎಲ್ಲವನ್ನೂ ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕುಡಿಯುವ ನೀರು, ವೆಂಟೆಡ್ ಡ್ಯಾಂ, ರಸ್ತೆ, ಮೀನುಗಾರಿಕೆ ಮುಂತಾದ ಮೂಲ ಸೌಕರ್ಯಗಳಿಗೆ ಒತ್ತು ಕೊಟ್ಟಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಸಹಕಾರದಿಂದಾಗಿ ಬೈಂದೂರು ಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಕಾರ್ಯಕರ್ತರು ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಹೇಳಿದರು.
ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ಆನಂದ ಖಾರ್ವಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ಮನೋಹರ ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯ್ಕ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಅಗಲಿದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ, ಅಶೋಕ ಕುಮಾರ್ ಶೆಟ್ಟಿ, ರಾಜೇಶ ಉಪ್ಪಿನಕುದ್ರು, ಜಯರಾಮ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬಿಜೆಪಿ ಬೈಂದೂರು ಮಂಡಲ ವಿನೋದ್ ಭಂಡಾರಿ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು.
ಬೈಂದೂರಿಗೆ ಹೆಚ್ಚು ಅನುದಾನ
ರಾಜ್ಯದ ಕೆಲವೇ ವಿಧಾನಸಭಾ ಕ್ಷೇತ್ರಗಳಿಗೆ ಅತೀ ಹೆಚ್ಚು ಅನುದಾನ ದೊರೆತಿದ್ದು, ಈ ಪೈಕಿ ಬೈಂದೂರು ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ಸೋಮೇಶ್ವರ ಮತ್ತು ಮರವಂತೆ ಬೀಚ್ ಅಭಿವೃದ್ಧಿ, ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಕೊಡಚಾದ್ರಿಗೆ ರೋಪ್‌ವೇ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಸಹಿತ ಯಾರೂ ಊಹಿಸಲು ಸಾಧ್ಯವಾಗದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದೆ. ಶಾಸಕರ ಮತ್ತು ಸಂಸದರ ನಿರಂತರ ಪ್ರಯತ್ನದ ಫಲವಾಗಿ ಸುಮಾರು 520 ಕೋಟಿ ರೂ. ವೆಚ್ಚದ ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಕೂಡ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಇದನ್ನು ಜನರಿಗೆ ಮನವರಿಕೆ ಮಾಡುವ ಜವಾಬ್ಧಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅದ್ಭುತ ಅಭಿವೃದ್ಧಿ ಕೆಲಸಗಳು ಆಗಿವೆ. ಇದನ್ನು ಜನರಿಗೆ ತಿಳಿಸುವ ಮತ್ತು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ತಕ್ಕ ಉತ್ತರವನ್ನು ನೀಡಬೇಕು. ಮುಂದಿನ ತಾಪಂ ಮತ್ತು ಜಿಪಂ. ಚುನಾವಣೆಯಲ್ಲಿ ಕಾರ್ಯಕರ್ತರಿಗೆ ವಿಶೇಷ ಜವಾಬ್ದಾರಿ ಇದೆ. ಸಂಘಟನೆಗೆ ಚ್ಯುತಿ ಬಾರದಂತೆ, ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಒತ್ತಡ ನೀಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲುವ ಯೋಜನೆಗಳನ್ನು ಹಾಕಿಕೊಂಡು ಈ ದೃಷ್ಟಿಯಲ್ಲಿ ಪಕ್ಷವನ್ನು ಸಜ್ಜುಗೊಳಿಸಲಾಗುವುದು.
ಕುಯಿಲಾಡಿ ಸುರೇಶ ನಾಯಕ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ