

| ರಮೇಶ ಜಹಗೀರದಾರ್ ದಾವಣಗೆರೆ
ನಾಯಕತ್ವ ಬದಲಾದ ನಂತರ ನಡೆಯುತ್ತಿರುವ ಬಿಜೆಪಿಯ ಪೂರ್ಣ ಪ್ರಮಾಣದ ರಾಜ್ಯ ಕಾರ್ಯಕಾರಿಣಿಗೆ ಬೆಣ್ಣೆ ನಗರಿ ಸಜ್ಜಾಗಿದೆ. ಸೆ.19ರಂದು ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ಕಾರ್ಯಕಾರಣಿ ನಡೆಯಲಿದ್ದು, ಸಂಘಟನೆ ಮತ್ತು ರಾಜಕೀಯವಾಗಿ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ವಿಸõತ ಕಾರ್ಯಕಾರಿಣಿ ನಡೆದಿರಲಿಲ್ಲ. ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ವರೆಗೆ 574 ಮಂದಿ ಅಪೇಕ್ಷಿತರು ಭಾಗವಹಿಸಲಿರುವುದು ವಿಶೇಷ.
ಮುಂದಿನ ವಿಧಾನಸಭಾ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು, ಇತ್ತೀಚೆಗೆ ದಾವಣಗೆರೆಗೆ ಬಂದಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಈ ಬಗ್ಗೆ ಪರ, ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗಬಹುದೆ ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಬಿ.ಎಸ್. ಯಡಿಯೂರಪ್ಪ, ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿರುವ ವಿಚಾರವೂ ಪ್ರಮುಖವಾಗಿ ಚರ್ಚೆಗೆ ಬರಲಿದ್ದು, ಪ್ರವಾಸದ ರೂಪುರೇಷೆಗಳು ಸಿದ್ಧವಾಗುವ ನಿರೀಕ್ಷೆಯಿದೆ. ಮುಂಬರುವ ಬಿಬಿಎಂಪಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆಗಳ ಬಗ್ಗೆಯೂ ಸಮಾಲೋಚನೆ ಆಗಲಿದೆ. ಜತೆಗೆ ಬೂತ್ ಮಟ್ಟದಲ್ಲಿ ಪಕ್ಷದ ಬೇರುಗಳನ್ನು ಇನ್ನಷ್ಟು ಬಲಪಡಿಸುವುದು, ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಚಿಂತನ ಮಂಥನ ನಡೆಯಲಿದೆ.
ಕಾರ್ಯಕಾರಿಣಿಗೆ ಪೂರ್ವಭಾವಿಯಾಗಿ ಶನಿವಾರ ಇಲ್ಲಿನ ಅಪೂರ್ವಾ ರೆಸಾರ್ಟ್ನಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಸಂಘಟನಾತ್ಮಕ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಅದಕ್ಕೂ ಮೊದಲು ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳ ಸಭೆ ನಡೆಯಲಿದ್ದು ಒಟ್ಟಾರೆಯಾಗಿ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಪುಷ್ಟಿ ಸಿಗಲಿದೆ.
ಎಲ್ಲೆಡೆ ಕೇಸರಿ ಧ್ವಜ: ಕಾರ್ಯಕಾರಿಣಿ ಸಭೆಗೆ ಬೆಣ್ಣೆ ನಗರಿ ದಾವಣಗೆರೆ ಸಜ್ಜಾಗಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಪಕ್ಷದ 10 ಸಾವಿರ ಬಾವುಟಗಳನ್ನು ಕಟ್ಟಲಾಗಿದ್ದು ಇಡೀ ಊರು ಕೇಸರಿಮಯವಾಗಿದೆ. ಕಾರ್ಯಕಾರಿಣಿಯಲ್ಲಿ ಭಾಗವಹಿಸುವವರು ದಾವಣಗೆರೆ ಬೆಣ್ಣೆ ದೋಸೆ, ಮಂಡಕ್ಕಿ-ಮೆಣಸಿನಕಾಯಿ, ಜೋಳ, ಸಜ್ಜೆ ರೊಟ್ಟಿ, ಮುಳುಗಾಯಿ ಎಣಗಾಯಿ ಪಲ್ಯ, ಚಟ್ನಿಪುಡಿ, ಗುಳ್ಳಾಡಿಕೆ ಉಂಡೆ ರುಚಿ ಸವಿಯಬಹುದು.
ಭಾಗವಹಿಸುವ ಪ್ರಮುಖರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಸಚಿವರಾದ ಕೆ.ಎಸ್. ಈಶ್ವರಪ್ಪ. ಆರ್. ಅಶೋಕ್
ಸಂಘಟನೆ ದೃಷ್ಟಿಯಿಂದ ಇದು ಮಹತ್ವದ ಕಾರ್ಯಕಾರಿಣಿ ಸಭೆ. ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಮತ್ತು ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. | ಜಿ.ಎಂ. ಸಿದ್ದೇಶ್ವರ ದಾವಣಗೆರೆ ಸಂಸದ