ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಬಿರುಸಿನ ಮತಪ್ರಚಾರ

BJP JYOTHIGANESH CAMPAIGN
Published on

ತುಮಕೂರು: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆಬಿದ್ದಿದ್ದು, ಇಡೀ ದಿನ ಬಿಜೆಪಿ ಅಭ್ಯರ್ಥಿ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿರುಸಿನ ಮತಪ್ರಚಾರ ನಡೆಸಿದರು.

ನಗರದ ಬಂಡೇಪಾಳ್ಯ ಹಾಗೂ ಶ್ರೀನಗರ ಬಡಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅವರ ಕುಟುಂಬದ ಜತೆ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ ಜ್ಯೋತಿಗಣೇಶ್, ವಿಶ್ವನಾಯಕ ನರೇಂದ್ರ ಮೋದಿ ಅವರ ನಾಯಕತ್ವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಲು ಬಿಜೆಪಿಗೆ ಅತಿಹೆಚ್ಚು ಮತ ನೀಡುವಂತೆ ಮನವಿ ಮಾಡಿದರು.

ಸೋಲಿಸಲು ಸ್ಪರ್ಧೆ: ಸ್ವತಂತ್ರವಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಸೊಗಡುಶಿವಣ್ಣ ಅವರದ್ದು ಸಮಾಜ ಕಟ್ಟುವ ರಾಜಕಾರಣವಲ್ಲ. ಕೆಡವುವ ರಾಜಕಾರಣ ಎಂದು ಜ್ಯೋತಿಗಣೇಶ್ ಹರಿಹಾಯ್ದರು.

ಪ್ರಧಾನಿ ಮೋದಿ ಅವರು ತುಮಕೂರಿಗೆ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ತುಮಕೂರು ವಿವಿಯಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ಸೇರಿದ್ದು ಜನರನ್ನು ನೋಡಿ ಮೋದಿ ರೋಡ್ ಶೋ ನಡೆಸಿದರು. ಇದು ಎದುರಾಳಿಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡು ತಿರುಗುತ್ತಿದ್ದಾರೆ. ಅವರ ಸ್ಪರ್ಧೆ ಸೋಲಿಸಲು. ಗೆಲ್ಲುವ ಉದ್ದೇಶದಿಂದಲ್ಲ ಎಂದರು.

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡಿ. ನಾನೆಂದೂ ರಾಜಕೀಯ ಕಾರಣಕ್ಕಾಗಿ ಇನ್ನೊಬ್ಬರನ್ನು ನೋಯಿಸುವ ಮಾತುಗಳನ್ನಾಡಿಲ್ಲ. ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಆದರೂ, ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಜನ ಇದಕ್ಕೆ ಕಿವಿಗೊಡದೆ ಮೋದಿ, ಬಿಎಸ್‌ವೈ ನೋಡಿ ಮತ ನೀಡುವಂತೆ ಮನವಿ ಮಾಡಿದರು.

ಸ್ಥಳೀಯ ಕಾರ್ಪೋರೇಟರ್ ನಿರ್ಮಲಾಶಿವಕುಮಾರ್ ಸೇರಿ ಬಂಡೇಪಾಳ್ಯ, ಶ್ರೀನಗರದ ಪಕ್ಷದ ಪ್ರಮುಖರು ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net