ನಿಗಮ, ಮಂಡಳಿಗಳು ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಗಳು

mp bjp new
Published on

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೆಡೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದರೆ, ಮತ್ತೊಂದೆಡೆ ನಿಗಮ, ಮಂಡಳಿ, ವಿವಿಧ ಸಮಿತಿಗಳ ನೇಮಕದ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯುತ್ತಿದೆ ಎಂದು ರಾಜ್ಯಸಭೆ ಸದಸ್ಯ, ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಪ್ರಭಾರಿ ಈರಣ್ಣ ಕಡಾಡಿ ವ್ಯಂಗ್ಯವಾಡಿದರು.

ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಲೋಕಸಭೆ ಕ್ಷೇತ್ರದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಪಷ್ಟತೆ ಇಲ್ಲದ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಮಹತ್ವ ನೀಡುತ್ತಿದೆ. ಆದರೆ, ಈ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಜನೋಪಯೋಗಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ದೂರಿದರು.

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಯುಪಿಎ ಸರ್ಕಾರದ ಭ್ರಷ್ಟಾಚಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ದಯನೀಯ ಸ್ಥಿತಿಯಲ್ಲಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಹಲವಾರು ಕ್ರಮಗಳಿಂದಾಗಿ ಭಾರತ ಇದು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಿದ್ದು, ದೇಶ ಆರ್ಥಿಕತೆಯಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿದೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಧಾರವಾಡ ಲೋಕಸಭೆ ಕ್ಷೇತ್ರದ ಸಂಚಾಲಕ ಎಂ. ನಾಗರಾಜ, ಧಾರವಾಡ ಲೋಕಸಭೆ ಕ್ಷೇತ್ರದ ಮತದಾರರು ಬಿಜೆಪಿ ಪರವಾಗಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸತತ ನಾಲ್ಕು ಬಾರಿ ಗೆಲುವು ಕಂಡಿದ್ದಾರೆ. ಅದಕ್ಕಿಂತ ಮೊದಲು ಡಾ. ವಿಜಯ ಸಂಕೇಶ್ವರ ಅವರು ಮೂರು ಬಾರಿ ಗೆಲುವು ಕಂಡಿದ್ದರು. ಈ ಕ್ಷೇತ್ರದಲ್ಲಿ ಯಾರೊಬ್ಬರೂ ಸತತ ಐದು ಬಾರಿ ಗೆಲುವು ಕಂಡಿಲ್ಲ. ಆದರೆ, ಪ್ರಲ್ಹಾದ ಜೋಶಿ ಅವರು ಐದನೇ ಬಾರಿಯೂ ಗೆಲ್ಲುವ ಮೂಲಕ ಹೊಸ ದಾಖಲೆ ಸೃಷ್ಟಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಅಮೃತ ದೇಸಾಯಿ, ಸೀಮಾ ಮಸೂತಿ, ಪ್ರಮುಖರಾದ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ ಹಾಗೂ ಇತರರು ಇದ್ದರು.

ಬಾಕ್ಸ್

ಮತ್ತೊಮ್ಮೆ ಮೋದಿ:

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಳೆದ 10 ವರ್ಷದಲ್ಲಿ ದೇಶದ 24 ಕೋಟಿ ಜನ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡ ಲೋಕಸಭೆ ಕ್ಷೇತ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಆ ಮೂಲಕ ಭಾರತ ಮತ್ತಷ್ಟು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ಮತದಾರ ಬಿಜೆಪಿಗೆ ಮತ ನೀಡಬೇಕು ಎಂದರು.

ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳು ಪ್ರತಿ ಬೂತ್​ನಿಂದ ಬಿಜೆಪಿಗೆ ಬರಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net