

ಹುಬ್ಬಳ್ಳಿ : ಬಿಜೆಪಿಯ ಯಾವೊಬ್ಬ ಮುಖಂಡರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಈಗಾಗಲೇ ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ, ಶಿವರಾಮ ಹೆಬ್ಬಾರ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ರ್ಚಚಿಸಿದ್ದು, ಬಿಜೆಪಿಯಲ್ಲಿಯೇ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಗೊತ್ತಿಲ್ಲ. ಭವಿಷ್ಯದ ಮಾತನಾಡಲು ನಾನು ಜ್ಯೋತಿಷ್ಯನಲ್ಲ ಎಂದು ಮಾರ್ವಿುಕವಾಗಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದರಲ್ಲಿ ಅನುಮಾನ ಇಲ್ಲ. ಆದರೆ, ಕಾಂಗ್ರೆಸ್ಗೆ ಆ ಪಕ್ಷದ ಮುಖಂಡರು ನಿರೀಕ್ಷಿಸಿದಷ್ಟು ಸ್ಥಾನಗಳು ಬರುವುದಿಲ್ಲ. ಆ ಪಕ್ಷಕ್ಕೆ ಮೈತ್ರಿಕೂಟ ಉಳಿಸಿಕೊಳ್ಳುವುದೇ ಸವಾಲಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಗೆ ನೇತೃತ್ವವಾಗಲಿ, ನಿಯತ್ತಾಗಲಿ ಇಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರನ್ನು ಮೋಸ ಮಾಡಿ ಅಧಿಕಾರ ಹಿಡಿದಿದೆ. ಆ ಪಕ್ಷದ ಮುಖಂಡರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬರುತ್ತಿವೆ. ದೂರು ಕೊಟ್ಟಿರುವ ಗುತ್ತಿಗೆದಾರರನ್ನೇ ಪೊಲೀಸ್ ಠಾಣೆಗೆ ಕರೆಯಿಸಿ, ಹೆದರಿಸುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯಲ್ಲಿ ಉಸಿರುಗಟ್ಟುವ ವಾರತಾವರಣ ಇದೆ ಎಂಬುದು ಸಚಿವ ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಅವರೇನು ಬಿಜೆಪಿಯಲ್ಲಿ ಇದ್ದಾರಾ ಎಂದರು.
ಸಚಿವ ಚಲುವರಾಯಸ್ವಾಮಿ ಅವರ ಆರೋಪಗಳಿಗೆ ಉತ್ತರಿಸಬೇಕಿಲ್ಲ. ಅವರ ಮೇಲೆಯೇ ಸಾಕಷ್ಟು ಆರೋಪಗಳಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕರ ನೇಮಕಾತಿ ಶೀಘ್ರ ನಡೆಯುತ್ತದೆ. ಪಕ್ಷದ ಪ್ರಮುಖರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ರಾಜ್ಯದ ಗಟ್ಟಿ ನಿಲುವನ್ನು ಸ್ಪಷ್ಟಪಡಿಸುವ ಗೋಜಿಗೆ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಲೋಡ್ಶೆಡ್ಡಿಂಗ್ ಪ್ರಾರಂಭಗೊಂಡಿದೆ. ಸಮರ್ಪಕ ಮಳೆ ಸುರಿಯದ ಕಾರಣ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಆದರೆ, ಉಚಿತ ವಿದ್ಯುತ್ ಕೊಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ವ್ಯಂಗ್ಯವಾಡಿದರು.
ಬಾಂಬೆ ಬಾಯ್ಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಯಾವುದೇ ಬೆಳವಣಿಗೆ ಆಗಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.