ಕಾಂಗ್ರೆಸ್​​ಗೆ ಮಾತ್ರ ಭವಿಷ್ಯವಿದೆ ಎಂದು BJP-JDS ಕಾರ್ಯಕರ್ತರು ನಂಬಿದ್ದಾರೆ: DK Shivakumar

DK Shivakumar
Published on

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅರಿವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.

ಕಳೆದ ವರ್ಷದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಉಪಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿನ ಮತಗಳ ಅಂತರವನ್ನು ಗಮನಿಸಿ. ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ 50 ಸಾವಿರ ಮತಗಳು ಬದಲಾಗಿವೆ. ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ .ಕಾಂಗ್ರೆಸ್ ಅಭ್ಯರ್ಥಿ 16 ಸಾವಿರ ಮತಗಳನ್ನು ಪಡೆದಿದ್ದರು. ಈ ಉಪಚುನಾವಣೆಯಲ್ಲಿ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕದಿದ್ದರೆ ಇಷ್ಟು ಪ್ರಮಾಣದಲ್ಲಿ ಮತಗಳು ವ್ಯತ್ಯಾಸವಾಗುತ್ತಿತ್ತೇ? ಆಮೂಲಕ ಜನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.

ತಮ್ಮ ಹುಳುಕು ಮುಚ್ಚಿಡಲು ಬಿಜೆಪಿ ಹೋರಾಟ

ಬಿಜೆಪಿಗೆ ಬೇಕಾಗಿರುವುದು ಕೇವಲ ಪ್ರಚಾರ. ಅವರು ಪ್ರತಿಭಟನೆ ಮಾಡಿದಷ್ಟು ನಮಗೆ ಒಳ್ಳೆಯದು. ಅವರು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಗೋಮುಖ ವ್ಯಾಘ್ರರ ಸತ್ಯಾಂಶವನ್ನು ನಾವು ಬಿಚ್ಚಿಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಚಾರವಾಗಿ ಅರ್ಜಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಅದನ್ನು ಪರಿಶೀಲಿಸಿದಾಗ 2020ರಲ್ಲಿ ಅವರ ಪಹಣಿ ತಿದ್ದುಪಡಿಯಾಗಿದೆ. ಈಗ ಅದನ್ನು ಮನೆ ಮನೆಗೆ ತೋರಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚಾಗಿದ್ದು, ಅವರವರೇ ಪರಸ್ಪರ ದೂರು ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಅವರೇ ಈ ವಿಚಾರ ತೀರ್ಮಾನ ಮಾಡಿಕೊಳ್ಳಬೇಕು. ಅವರ ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ ನಮ್ಮ ಲೆಕ್ಕಕ್ಕೆ ಅವರು ಒಂದೇ ಗುಂಪು. ಜೆಡಿಎಸ್ ಚಿಹ್ನೆ ಬೇರೆಯಾದರೂ ಅವರೂ ಅದೇ ಗುಂಪು. ಜೆಡಿಎಸ್ ಅವರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ. ಅವರು ಹೋರಾಟ ಮಾಡಿ ನಮಗೆ ಪ್ರಚಾರ ನೀಡುತ್ತಿದ್ದು, ಮಾಡಲಿ ಎಂದು ತಿಳಿಸಿದರು.

ಮುಸಲ್ಮಾನರ ಮತ ಕೇಳುವ ನೈತಿಕತೆ ಜೆಡಿಎಸ್​ಗಿಲ್ಲ

ಕುಮಾರಸ್ವಾಮಿ ಬಿಜೆಪಿಯವರ ಜತೆ ಸೇರಿದರೆ ಮುಸಲ್ಮಾನರು ಹೇಗೆ ಮತ ಹಾಕುತ್ತಾರೆ. ಮುಸಲ್ಮಾನರನ್ನು ಎನ್ ಡಿಎ ಮೈತ್ರಿಕೂಟ ವಿಶ್ವಾಸಕ್ಕೆ ಪಡೆದಿಲ್ಲ. ಹೀಗಿರುವಾಗ ಅವರು ಯಾಕೆ ಮತ ಹಾಕುತ್ತಾರೆ. ನೀವು ಅವರಿಗೆ ನೆರವಾಗಿದ್ದರೆ, ಎನ್​ಡಿಎ ವತಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡಿದ್ದಾರಾ? ಮಂತ್ರಿ ಮಾಡಿದ್ದಾರಾ? ಅವರಿಗಾಗಿ ಕಾರ್ಯಕ್ರಮ ಕೊಟ್ಟಿದ್ದಾರಾ? ಅವರಿಗಿದ್ದ 4% ಮೀಸಲಾತಿ ಕಿತ್ತುಕೊಂಡಿದ್ದೀರಿ. ನಿಮಗೆ ಅವರ ಮತ ಕೇಳುವ ನೈತಿಕತೆಯೇ ಇಲ್ಲ. ನಿಖಿಲ್ ಪಾಪ ಚಿಕ್ಕ ಹುಡುಗ. ಅವನ ಅನುಭವದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರವಾಗಿ ದೊಡ್ಡ ಗೌಡರು ಮಾತನಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net