ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಜಗ್ಗುವುದಿಲ್ಲ, ಬಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ನುಡಿ

mysore
Published on

ಮೈಸೂರು: ಬಿಜೆಪಿ, ಜೆಡಿಎಸ್ ಕಪಟ ರಾಜಕಾರಣಕ್ಕಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ, ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಜಗ್ಗುವುದಿಲ್ಲ. ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನು ನಾನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.


ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮ ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸಿದ್ದು, ಇದಕ್ಕೆ ನಾಡಿನ ಜನತೆ ಅವಕಾಶ ಕೊಡಲ್ಲ ಎಂಬ ನಂಬಿಕೆಯಿದೆ ಎಂದು ಹೇಳಿದರು.


ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸಲ್ಲ. ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ ಎಂದು ಕುಟುಕಿದರು.


ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ‘ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು’ ಎಂದು ದೇವೇಗೌಡರು ಹೇಳಿದ್ದರು. ‘ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ’ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ನನಗೆ ಇಷ್ಟೆಲ್ಲ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ. ನನ್ನ ಪತ್ನಿ ಈವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. 2 ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ. ನಾವು ಭ್ರಷ್ಟಾಚಾರ ಮಾಡಿಲ್ಲ. ಜನರಿಗೆ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ ಎಂದರು.


ನಾನು ಶೂನ್ಯದಿಂದ ರಾಜಕೀಯ ಪ್ರಾರಂಭಿಸಿದೆ. 1983ರಲ್ಲಿ ಮೊದಲ ಚುನಾವಣೆಗೆ ಠೇವಣಿಗೆ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250 ರೂ. ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ನನ್ನ 9 ಚುನಾವಣೆಗಾಗಿ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ದಲಿತರು, ಶೋಷಿತರು, ಅಲ್ಪಸಂಖ್ಯಾತರ, ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು.


ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ವಿರುದ್ಧ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧವಿಲ್ಲ ಎನ್ನುವುದು ದಾಖಲೆಗಳಲ್ಲಿದೆ. ಹೀಗಾಗಿ, ಹಗರಣವೇ ಅಲ್ಲದ ಮುಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.


ಮುಡಾ ವಿಷಯದಲ್ಲಿ ನನ್ನದೊಂದು ಪತ್ರ ಇಲ್ಲ, ಸಹಿ ಇಲ್ಲ, ಆಗ ನಮ್ಮ ಸರ್ಕಾರ ಅಧಿಕಾರದಲ್ಲೂ ಇರಲಿಲ್ಲ. ಆದರೂ ಹಗರಣ, ಹಗರಣ ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನೀವ್ಯಾರೂ ಸೊಪ್ಪು ಹಾಕಬೇಡಿ, ನಂಬಬೇಡಿ ಎಂದು ಸಭಿಕರಿಗೆ ಮನವರಿಕೆ ಮಾಡಲು ಯತ್ನಿಸಿದರು.


ಬಿ.ಎಸ್. ಯಡಿಯೂರಪ್ಪ ಅವರು ಇಳಿವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿದ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆಸಿದ ತಮ್ಮ ಹಗರಣಗಳಿಗೆ ಸುಪ್ರೀಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದರು.


ಯಡಿಯೂರಪ್ಪ ಚೆಕ್‌ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ ಎಂದು ಕುಟುಕಿದರು.


ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದು, ಹಿಂದೆ ಮನೆ ಸಾಲ ತಗೊಂಡು ಕಟ್ಟಿಸಿದ್ದ ಮನೆಯನ್ನು ಸಾಲ ತೀರಿಸಲಾಗದೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಎದುರಿಸಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟ್ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.


ಕುಮಾರಸ್ವಾಮಿ, ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದರೂ ರಾಜಭವನದಿಂದ ಇಲ್ಲಿಯವರೆಗೂ ನೋಟಿಸ್ ನೀಡಿಲ್ಲ. ಆದರೆ, ನನಗೆ ಮಾತ್ರ ನೋಟಿಸ್ ಬಂದಿದೆ ಎಂದರು.


ಮುಡಾ ವಿಷಯದಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ. ಬೇಡಿಕೆ ಇಟ್ಟಿಲ್ಲ, ಶಿಫಾರಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನು ಹೇಳಿ? ನಾನು ತಪ್ಪು ಮಾಡಿದ್ದೀನಾ ಹೇಳಿ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net