

ಮದ್ದೂರು: ಬಿಜೆಪಿ ಮತ್ತು ಜೆಡಿಎಸ್‌ನಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಪಾದಯಾತ್ರೆ ಅಧಿಕಾರದ ದಾಹಕ್ಕೆ ಅಲ್ಲ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಬೇಕು ಎಂಬ ಉದ್ದೇಶದಿಂದ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಟ್ಟಣದ ಪೇಟೆಬೀದಿಯ ಶ್ರೀ ರಾಮಮಂದಿರ ಪಾರ್ಕ್ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರಲು ಸಾಕಷ್ಟು ಭರವಸೆ ಕೊಟ್ಟಿದ್ದರು. ಕಳೆದ 16 ತಿಂಗಳಲ್ಲಿ ರಾಜ್ಯ ದುಸ್ಥಿತಿಗೆ ಬಂದಿದೆ. ದಿನಬಳಕೆ ವಸ್ತುಗಳ ದರ ಏರಿಕೆ ಆಗಿದೆ. ರೈತರಿಗೆ ಹಾಲಿನ ಪ್ರೋತ್ಸಾಹಧನ ಸಿಕ್ತಿಲ್ಲ. ಸಿದ್ದರಾಮಯ್ಯ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಾ ರಾಜ್ಯದ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾವಿರಾರು ಕೋಟಿ ರೂ. ರೈತರ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಅಯೋಗ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 1 ಲಕ್ಷ 95 ಸಾವಿರ ಕೋಟಿ ರೂ. ಸಾಲ ಮಾಡಿದೆ. ಎಸ್‌ಇಪಿ, ಟಿಎಸ್ಪಿ ಹಣ ಬೇರೆ ಕಡೆಗೆ ವರ್ಗಾವಣೆ ಆಗಿದೆ. ದಲಿತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆೆ. ಇಂಥಾ ಭ್ರಷ್ಟ ಮುಖ್ಯಮಂತ್ರಿ ನಮಗೆ ಬೇಕಾ? ಇದರಿಂದ ಜನರಿಗೆ, ರೈತರಿಗೆ ಒಳ್ಳೆಯದಾಗಲ್ಲ ಎಂದರು.
ಮುಡಾದಲ್ಲಿ ಬಡವರಿಗೆ ಒಂದೇ ಒಂದು ಸೈಟ್ ಕೊಟ್ಟಿಲ್ಲ. ಸಾರ್ವಜನಿಕರು ಸೈಟ್‌ಗಾಗಿ 1 ಲಕ್ಷ ಅರ್ಜಿಗಳನ್ನು ಹಾಕಿದ್ದಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದ ಮೇಲೆ ಮುಡಾದಲ್ಲಿ 5 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ವಾಲ್ಮೆಕಿ ಹಗರಣದಲ್ಲಿ 187 ಕೋಟಿ ರೂ. ಅವ್ಯವಹಾರ ಆಗಿದೆ. ಆದರೂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದೆ ಅಧಿಕಾರದ ಆಸೆಗಾಗಿ ಮುಂದುವರಿಯುತ್ತಿರುವುದು ಸರಿಯಲ್ಲ. ಇಂತಹ ಜನ ವಿರೋಧಿ ಸರ್ಕಾರ ರಾಜ್ಯದಿಂದ ತೊಲಗಬೇಕು. ಯಾವುದೇ ಸಂದರ್ಭದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಮಾಡಲು ತಯಾರಿದ್ದಾರೆ. ಆದರೆ, ಕಾಂಗ್ರೆಸ್‌ನ ಅಂಗ ಪಕ್ಷವಾದ ತಮಿಳುನಾಡಿನ ಅಣ್ಣ ಡಿಎಂಕೆಯಿಂದ ಮೇಕೆದಾಟು ಯೋಜನೆಗೆ ಅನುಮತಿ ಪತ್ರ ಕೊಡಿಸಿದರೆ, 15 ದಿನಗಳಲ್ಲಿ ಯೋಜನೆ ಆರಂಭವಾಗಲಿದೆ. ಇದು ಕಾಂಗ್ರೆಸ್ ಪಕ್ಷದವರಿಂದ ಸಾಧ್ಯನಾ ಎಂದು ಸವಾಲ್ ಹಾಕಿದರು.
ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದಲ್ಲಿ ಸದೃಢವಾಗಿ ಜೆಡಿಎಸ್ ಬೆಳೆಸಿದ್ದಾರೆ. ಕಾಂಗ್ರೆಸ್‌ನವರು 2 ಬಾರಿ ದೇವೇಗೌಡರ ಮನೆಯ ಬಾಗಿಲಿಗೆ ಬಂದು ಸಹಾಯ ಪಡೆದು ಅಧಿಕಾರ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತೋರಿಸಲು ಎಂದು ಸವಾಲ್ ಹಾಕಿದರು.
ವಿರೋಧ ಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಮಾಜಿ ಸಚಿವರಾದ ಸಿ.ಟಿ.ರವಿ, ಅಶ್ವತ್ಥನಾರಾಯಣ್, ಸುರೇಶ್‌ಕುಮಾರ್, ಸಿ.ಎಸ್.ಪುಟ್ಟರಾಜು, ಶ್ರೀರಾಮುಲು, ಬೈರತಿ ಬಸವರಾಜು, ಸುನೀಲ್‌ಕುಮಾರ್, ಬಿ.ಸಿ.ಪಾಟೀಲ್, ಸಾ.ರಾ.ಮಹೇಶ್, ಶಾಸಕರಾದ ಪಿ.ರಾಜೀವ, ಎಚ್.ಟಿ.ಮಂಜು, ಅರವಿಂದ ಬೆಲ್ಲದ, ಸುರೇಶ್‌ಬಾಬು, ಮಂಜು, ಮಾಜಿ ಶಾಸಕ ಸುರೇಶ್‌ಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಸಂತೋಷ್ ಡಿ.ಸಿ.ತಮ್ಮಣ್ಣ, ಮಾದನಾಯನಹಳ್ಳಿ ರಾಜಣ್ಣ ಇದ್ದರು.