

ಮೈಸೂರು: ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಬದಲಾಗಿ ಬರಗಾಲದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದರು.
ಆದರೆ ಕೇಂದ್ರ ಸರ್ಕಾರದ ವಿಚಾರ ಎರಡನೇ ಹಂತದ್ದು, ಆದರೆ ಮೊದಲ ಹಂತದಲ್ಲಿ ಇವರು ಏನು ಮಾಡಿದ್ದಾರೆಂದು ಹೇಳಬೇಕಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಏನು ಮಾಡಿದ್ದಾರೆ? ಕುಡಿಯುವ ನೀರು, ಮೇವಿಗೆ ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಹಣ ಬಿಡುಗಡೆ ಮಾಡಿಲ್ಲ. ಈ ನಡುವೆ ಬರ ಪರಿಸ್ಥಿತಿಯ ಬಗ್ಗೆ ನನಗೆ ತಿಳುವಳಿಕೆಯಿಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಬರ ಪರಿಸ್ಥಿತಿ ಸಂಬಂಧ ಏನು ಮಾಡಿದ್ದಾರೆ ಎಂದು ಹೇಳಲಿ ಎಂದ ಅವರು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬರಗಾಲ ಪರಿಸ್ಥಿತಿಯನ್ನು ಪ್ರಮುಖ ವಿಚಾರವಾಗಿ ಪ್ರಸ್ತಾಪಿಸುತ್ತೇವೆ. ಬಿಜೆಪಿ-ಜೆಡಿಎಸ್ ವಿರೋಧ ಪಕ್ಷದ ಸ್ಥಾನದಲ್ಲಿರುವುದರಿಂದ ಇಬ್ಬರೂ ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದರು.