ಬಿಜೆಪಿ, ಜೆಡಿಎಸ್ ನಿಂದ ಹಿಂದು-ಮುಸ್ಲಿಂ ಭಾಗ ಮಾಡಿ ದ್ವೇಷ ಸಾಧನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ

lakshman (2)
Published on

ಮೈಸೂರು: ವಕ್ಫ್ ಆಸ್ತಿ ವಿಚಾರದಲ್ಲಿ ಗುಲಬರ್ಗ, ವಿಜಾಪುರದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರುವುದನ್ನು ಬಿಜೆಪಿ ಹಿಂದು-ಮುಸ್ಲಿಂ ಎಂದು ವಿಭಾಗ ಮಾಡಿ ಜನರಲ್ಲಿ ದ್ವೇಷಭಾವ ಬಿತ್ತಿ ಉಪ ಚುನಾವಣೆಯಲ್ಲಿ ಲಾಭ ಪಡೆಯುವ ಹುನ್ನಾರ ನಡೆಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿಯೇ ರಾಜ್ಯದಲ್ಲಿ 1.15 ಸಾವಿರ ಎಕರೆ ಇದ್ದ ವಕ್ಫ್ ಆಸ್ತಿಯನ್ನು ಈಗ 23 ಸಾವಿರ ಎಕರೆ ಮಾಡಲಾಗಿದೆ. ಇದಕ್ಕೆ ಯಡಿಯೂರಪ್ಪ, ಜಗದೀಶ್‌ಶೆಟ್ಟರ್, ಸದಾನಂದಗೌಡ, ಬಸವರಾಜ ಬೊಮ್ಮಾಯಿ ಕಾರಣ ಎನ್ನ್ನುವುದನ್ನು ಸಚಿವ ಎಂ.ಬಿ.ಪಾಟೀಲ್ ದಾಖಲೆ ಸಹಿತ ಬಿಡುಗಡೆ ಮಾಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು 33 ಎಕರೆಯನ್ನು ವಕ್ಫ್ ಆಸ್ತಿ ಎಂದು ಬರೆದು ಕೊಡಲಾಗಿದೆ. ಆದರೆ ಬಿಜೆಪಿಯವರು ಇದನ್ನು ಮರೆ ಮಾಚಿ ಬೊಬ್ಬೆ ಹೊಡೆಯುತ್ತಿದ್ದಾರೆ. ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಮಾರು 109 ಪ್ರಕರಣದಲ್ಲಿ ಕಲಂ ನಂಬರ್ 09 ರಲ್ಲಿ 1400 ಎಕರೆಯನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವವಾಗಿ ವಿಜಯಪುರದಲ್ಲಿ 3 ಪ್ರಕರಣದಲ್ಲಿ 11ಎಕರೆ ಎಂದು ಹೇಳಿ ನೋಟಿಸ್ ನೀಡಲಾಗಿದೆ. ಆದರೆ ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

1947ರಿಂದಲೂ ರೈತರಿಗೆ ನೋಟಿಸ್ ಕೊಡುವ ವ್ಯವಸ್ಥೆ ಇದೆ. ಇದು ಹೊಸದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿದ್ದಾರೆ. ಜನಸಾಮಾನ್ಯರು ಒಡೆದು ಹಾಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿಯವರ ಕುತಂತ್ರ ರಾಜಕಾರಣಕ್ಕೆ ಬಲಿಯಾಗ ಬೇಡಿ. ಮುಸ್ಲಿಂ ಸಮುದಾಯದ ಜನರು ಸಹ ಭಾರತ ಮಾತೆಯ ಮಕ್ಕಳು ದೇಶದ ಸಂಪತ್ತಿನಲ್ಲಿ ಅವರಿಗೂ ಭಾಗ ಎನ್ನುವುದನ್ನು ಮರೆಯಬೇಡಿ ಎಂದು ಮನವಿ ಮಾಡಿದರು.

ಶಾಸಕ ಟಿ.ಎಸ್.ಶ್ರೀವತ್ಸ ಅವರು ಮುಡಾದಲ್ಲಿ 50:50 ಪ್ರಕರಣದ ಪಟ್ಟಿ ಬಿಡುಗಡೆ ಮಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಎಷ್ಟು ಜನರಿದ್ದಾರೆ ಎನ್ನುವುದನ್ನು ತಿಳಿಸಲಿ. ಆದರೆ ಸಿದ್ದರಾಮಯ್ಯ ಅವರ ಇಮೇಜ್‌ಗೆ ಮಸಿ ಬಳಿಯ ಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ನವರ ಹೆಸರು ಮಾತ್ರ ಹೇಳುತ್ತಿದ್ದಾರೆ. ಇಡಿ ಮುಖ್ಯಸ್ಥರು ಸ್ನೇಹಮಯಿ ಕೃಷ್ಣ ನೀಡಿದ ಸಿದ್ದರಾಮಯ್ಯ ವಿರುದ್ಧದ ವಿಚಾರ ಮಾತ್ರ ಮಾಡುತ್ತಿದ್ದಾರೆ. ಈತ ಪೊಲೀಸರನ್ನು ಹೆದರಿಸುತ್ತಿದ್ದು, ನನಗೆ ವಕೀಲರ ಮೂಲಕ ನೋಟಿಸ್ ನೀಡಿ ಹೆದರಿಸಲು ಮುಂದಾಗಿದ್ದಾರೆ. ಆದರೆ ನಾನು ಹೆದರುವವನಲ್ಲ ಎಂದರು.

ಮುಡಾದಲ್ಲಿ 50:50 ಅನುಪಾತದ ಕಾನೂನು ತಂದವರು ಬಿಜೆಪಿಯವರೇ ಅಗಿದ್ದಾರೆ. ಈ ಅನುಪಾತದ ಅಡಿ ರೈತರಿಗೆ ನಿವೇಶನ ನೀಡಿ ಈಗ ವಾಪಸ್ ಕೊಡಿ ಎಂದರೆ ಕೊಡುತ್ತಾರೆಯೇ?. ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಗ್ಯಾರಂಟಿ ಸುಳ್ಳು ಆಶ್ವಾಸನೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ವಾಪಸ್ ಪಡೆಯುವುದಿಲ್ಲ. ಆದರೆ ಮೋದಿ ಅವರೇ 2014 ರ ಚುನಾವಣೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದು ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾಂಗ್ರೆಸ್ ಗ್ರಾಮಾಂತರ ಮಾಧ್ಯಮ ವಕ್ತಾರ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net