

ಎನ್.ಆರ್.ಪುರ: ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿ, ಜೆಡಿಎಸ್‌ಗೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ಕಾಂಗ್ರೆಸ್‌ನ ಸಹಕಾರದಿಂದ ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿದ್ದ ಜೆಡಿಎಸ್‌ನ ಪ್ರಮುಖ ಮುಖಂಡರು ಬಿಜೆಪಿ ಜತೆ ಸೇರಿ ಅವಕಾಶ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಜಾರಿಗೊಳಿಸಿದರೂ ಅಪಪ್ರಚಾರ ಮಾಡಲಾಯಿತು. ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ ಸರ್ಕಾರ ಅಭಿವೃದ್ಧಿಗೆ ಅನುದಾನ ಕಡಿಮೆ ಮಾಡಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ, ಸಹಕಾರ ನೀಡುವಲ್ಲಿ ಬಿಜೆಪಿ, ಜೆಡಿಎಸ್ ವಿಲವಾಗಿದೆ. ಚನ್ನಪಟ್ಟಣ ಮತ್ತು ಶಿಗ್ಗಾವಿ ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ಸರ್ಕಾರದ ಜನಪರ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲ್‌ನಟರಾಜ್, ಮುಖಂಡರಾದ ಪಿ.ಆರ್.ಸದಾಶಿವ, ಎಸ್.ಡಿ.ರಾಜೇಂದ್ರ, ಸುರಯ್ಯಬಾನು, ಪ್ರಶಾಂತ್ ಶೆಟ್ಟಿ, ಉಪೇಂದ್ರ, ಸುಬ್ರಹ್ಮಣ್ಯ, ಜುಬೇದಾ, ಸೈಯದ್ ವಸೀಂ, ಬಿನು, ಸುನಿಲ್‌ಕುಮಾರ್, ನಂದೀಶ, ಶಿವಣ್ಣ, ಈ.ಸಿ.ಜೋಯಿ, ಎಂ.ಆರ್.ರವಿಶಂಕರ್, ಮನು, ಮಾಳೂರು ದಿಣ್ಣೆ ರಮೇಶ್, ಬೆನ್ನಿ ಮತ್ತಿತರರಿದ್ದರು.