

ಕೆ.ಎಂ.ದೊಡ್ಡಿ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆವರೆಗೂ ಉಳಿಯುವುದೇ ಸಂಶಯ. ಅವರವರಲ್ಲೇ ಟಿಕೆಟ್ ಹಂಚಿಕೆ ವಿಷಯದಲ್ಲಿ ಆಂತರಿಕ ಗುದ್ದಾಟ ನಡೆಯುತ್ತಿದೆ ಎಂದು ಶಾಸಕ ಕದಲೂರು ಉದಯ್ ಭವಿಷ್ಯ ನುಡಿದರು.
ಶುಕ್ರವಾರ ಸಮೀಪದ ಚಿಕ್ಕರಸಿನಕೆರೆ ಶ್ರೀ ಕಾಲಭೈರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರ ಆವರಣದಲ್ಲಿ 3 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.
ಜೆಡಿಎಸ್ ಪಕ್ಷವನ್ನು ಈಗಾಗಲೇ ಜನರು ಕೈಬಿಟ್ಟಿದ್ದು, ಬಿಜೆಪಿ ಪಕ್ಷಕ್ಕೆ ಮತ್ತೊಬ್ಬರು ಅನಿವಾರ್ಯವಾಗಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದೆ. ಆದರೆ, ಅದು ಯಶಸ್ವಿಯಾಗುವುದಿಲ್ಲ ಎಂದು ಕುಟುಕಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆಂದು ಕನಸು ಕಾಣುತ್ತಿದ್ದಾರೆ. ಈಗ ಮಾತನಾಡುತ್ತಿರುವವರು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದರೂ ಏಕೆ ಹೆಚ್ಚು ಸ್ಥಾನ ಗೆಲ್ಲಲ್ಲು ಸಾಧ್ಯವಾಗಿಲ್ಲ. ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆಂದು ಲೇವಡಿ ಮಾಡಿದರು.
ದೇಶದಲ್ಲಿ ಪಂಚರಾಜ್ಯ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಕನಿಷ್ಠ ಮೂರು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಶತಸಿದ್ಧ. ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅಧಿವೇಶನ ಮುಗಿದ ಕೂಡಲೇ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ಸೇರಿ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಕಡೆ ಭಾಗದ ರೈತರ ಸಮಸ್ಯೆ ಚರ್ಚೆ: ಮದ್ದೂರು ತಾಲೂಕಿನ ಕಡೆಯ ಭಾಗದ ರೈತರ ಸಮಸ್ಯೆಯನ್ನು ಚರ್ಚಿಸಲಾಗುವುದು. ಪ್ರತಿ ಬಾರಿಯೂ ಕಡೆ ಭಾಗಕ್ಕೆ ಕಾವೇರಿ ನೀರು ತಲುಪದೇ ರೈತರು ಹೈರಾಣಾಗಿದ್ದು, ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದು ಮದ್ದೂರು ತಾಲೂಕಿನ ಎಲ್ಲ ಭಾಗಗಳಿಗೂ ಕಾವೇರಿ ನೀರು ತಲುಪಲು ಕ್ರಮ ವಹಿಸುತ್ತೆನೆ ಎಂದು ಭರವಸೆ ನೀಡಿದರು.
ಶ್ರೀ ಕಾಲಭೈರೇಶ್ವರ ಸ್ವಾಮಿಯ ದೇವಾಲಯಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ ಮತ್ತು ಪ್ರವಾಹದ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದಂತೆ 3 ಕೋಟಿ ರೂ. ವೆಚ್ಚದಲ್ಲಿ ಶಿಂಷಾ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಕೆಲಸವನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್. ರಾಜೀವ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಹಳ್ಳಿ ದೊಡ್ಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾ.ಪಂ. ಅಧ್ಯಕ್ಷ ಕದಲೂರು ತಿಮ್ಮೇಗೌಡ, ಮುಖಂಡ ಯಾಜಮಾನ್ ಶಿವಲಿಂಗೇಗೌಡ ಸೇರಿದಂತೆ ಹಲವರಿದ್ದರು.