ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ 11ರಿಂದ, ರಾಯಚೂರು ಜಿಲ್ಲೆ ಗಿಲ್ಲೆಸುಗೂರಿನಿಂದ ಆರಂಭ

Tipparaju Havaldara BJP
ತಿಪ್ಪರಾಜು ಹವಾಲ್ದಾರ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ
Published on

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ತಾಲೂಕಿನ ಗಿಲ್ಲೆಸುಗೂರಿನಿಂದ ಅ.11ರಂದು ‘ಬಿಜೆಪಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಲಾಗುತ್ತಿದೆ. ಯಾತ್ರೆ ನಿಮಿತ್ತ ಗ್ರಾಮದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಪಕ್ಷದ ಇಬ್ಬರು ನಾಯಕರ ನೇತೃತ್ವದಲ್ಲಿ ರಾಜ್ಯದ 100 ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ, ಸಮಾವೇಶ ನಡೆಸಲಾಗುವುದು. ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಮತ್ತೊಂದು ತಂಡ 100 ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳಲಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದ ನಂತರದಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವುದರ ಜತೆಗೆ ಪಕ್ಷದ ಸಂಘಟನೆ ಕಾರ್ಯ ಕೈಗೊಳ್ಳುವ ಮೂಲಕ ಮುಂಬರುವ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಗೊಳಿಸುವ ಕೆಲಸವನ್ನು ಯಾತ್ರೆ ಮೂಲಕ ಮಾಡಲಾಗುತ್ತಿದೆ. ಪಕ್ಷದ ಎಲ್ಲ ಮೋರ್ಚಾಗಳಿಂದ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಅ.30ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಏರ್ಪಡಿಸಲಾಗುತ್ತಿದೆ. ಮೈಸೂರಿನಲ್ಲಿ ಎಸ್ಸಿ ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ ನಡೆಸಲಾಗುವುದು. ಬಳ್ಳಾರಿಯಲ್ಲಿ ಎಸ್ಟಿ ಮೋರ್ಚಾ ಸಮಾವೇಶ ಆಯೋಜಿಸಲಾಗುತ್ತಿದ್ದು, 10 ಲಕ್ಷ ಜನ ಸೇರಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net