

ಶಿರಹಟ್ಟಿ: ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಜನಾಕ್ರೋಶ ಯಾತ್ರೆಯು ಏ.22ರಂದು ಗದಗನಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯು ಬಸವೇಶ್ವರ ಸರ್ಕಲ್‌ನಿಂದ ಆರಂಭವಾಗಿ ಗಾಂಧಿ ಸರ್ಕಲ್‌ವರೆಗೆ ಸಾಗಲಿದೆ. ಬಳಿಕ ಬಹಿರಂಗ ಸಮಾವೇಶ ನಡೆಯಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಐದು ಗ್ಯಾರಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಇದೀಗ ಆ ಗ್ಯಾರಂಟಿಗಳಿಗೆ ವರ್ಷಕ್ಕೆ ಸಾವಿರಾರು ಕೋಟಿ ರೂ. ಅಗತ್ಯವಿದ್ದು ಅದನ್ನು ಪೂರೈಸುವ ಹೆಸರಿನಲ್ಲಿ ಜನರ ಮೆಲೆ ತೆರಿಗೆ ಮತ್ತು ದರ ಏರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್, ಹಾಲು, ಡೀಸೆಲ್, ಬಸ್, ಛಾಪಾ ಕಾಗದ, ಮದ್ಯ, ವೈದ್ಯಕೀಯ ಸೇವೆ ಸೇರಿದಂತೆ 40ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆಯಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಾಮಾನ್ಯ ಜನರ ಮೇಲೇ ಬರೆ ಎಳೆದಿದೆ. ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ಹಿಂದು ಧರ್ಮವನ್ನೇ ವಿಭಜಿಸಲು ಯತ್ನಿಸುತ್ತಿದೆ. ಈ ಎಲ್ಲ ರಾಜಕೀಯ ತಂತ್ರಗಾರಿಕೆಗಳು ಕೊನೆಗೆ ಕಾಂಗ್ರೆಸ್ ನಾಶವಾಗಲು ಕಾರಣವಾಗಲಿದೆ ಎಂದರು.
ಪ್ರತಿಪಕ್ಷ ನಾಯಕ ಆರ್. ಅಶೋಕ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಬಿ.ಡಿ. ಪಲ್ಲೇದ, ಜಾನು ಲಮಾಣಿ, ಮೋಹನ ಗುತ್ತೆಮ್ಮನವರ, ತಿಮ್ಮರಡ್ಡಿ ಮರಡ್ಡಿ, ಸುನೀಲ ಮಹಾಂತಶೆಟ್ಟರ್, ಬಸವರಾಜ ವಡವಿ, ಪ್ರವೀಣಗೌಡ ಪಾಟೀಲ ಇತರರಿದ್ದರು.