

ರಾಯಚೂರು ಬಿಜೆಪಿಯವರಿಗೆ ವಿಷಯಗಳಿಲ್ಲದೇ ಧರ್ಮ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ವಿಷಯದಲ್ಲಿ ವಕೀಲರು, ಜನರು ನೀಡಿದ ದೂರಿನ ಮೇರೆಗೆ ಎಸ್‌ಐಟಿ ತನಿಖೆಗೆ ಸರ್ಕಾರ ಸೂಚಿಸಿತ್ತು. ತನಿಖೆ ಮಂದುವರೆದಿದೆ. ಎಸ್‌ಐಟಿ ನೀಡುವ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತದೆ. ತಪ್ಪಿಸ್ಥರನ್ನು ಪತ್ತೆ ಮಾಡಿ ವಿಚಾರಣೆ ನಡೆಸುವ ಕೆಲಸ ನಡೆಯುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೇ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಆದರೆ ಬಿಜೆಪಿಯವರು ಮಾತ್ರ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಈ ಹಿಂದೆ ಮಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸ ಮಾಡಿ ಅಶಾಂತಿಗೆ ಕಾರಣವಾಗಿದ್ದರು. ಅವರಿಗೆ ಅಭಿವೃದ್ಧಿ ಬೇಕಿಲ್ಲ. ರಾಜ್ಯದ ಹಿತಕ್ಕೂ ಧ್ವನಿಯೆತ್ತುವದಿಲ್ಲ. ಧಾರ್ಮಿಕ ಭಾವನೆಗಳ ಮೇಲೆ ರಾಜಕೀಯ ಮಾಡುವದೇ ನಿತ್ಯದ ಕೆಲಸವಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಬಂಧನ ಕುರಿತಾಗಿ ಕಾನೂನು ಬಾಹಿರ ಕೃತ್ಯ ಯಾರೇ ಮಾಡಿದರೂ ತಪ್ಪು. ಅವರು ಆನ್‌ಲೈನ್, ಆಫ್‌ಲೈನ್ ಬೆಟ್ಟಿಂಗ್ ದಂಧೆ ನಡೆಸಿರುವ ಆರೋಪ ಕೇಳಿಬಂದಿದೆ. ಸರ್ಕಾರ ಯಾವೊತ್ತು ಅಕ್ರಮಗಳಿಗೆ ಬೆಂಬಲಿಸುವದಿಲ್ಲ. ಕಾನೂನು ವ್ಯವಸ್ಥೆಯಲ್ಲಿ ತಪ್ಪು ಎಸಗಿದ್ದರೆ ಕ್ರಮವಾಗುತ್ತದೆ ಎಂದಷ್ಟೇ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಿಗಿರಿ, ಜಯಣ್ಣ, ಜಿ.ಶಿವಮೂರ್ತಿ ಇದ್ದರು.