

ಹುಬ್ಬಳ್ಳಿ : ಮುಡಾ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಅನಗತ್ಯ ರಾಜಕಾರಣ ಮಾಡುತ್ತಿದೆ. ಪ್ರಧಾನಿ ಅವರು ಸಹ ವಿವಿಧ ರಾಜ್ಯಗಳ ಚುನಾವಣಾ ರ್ಯಾಲಿಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮಗೂ ಸಹ ರಾಜಕಾರಣ ಮಾಡಲು ಬರುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹರಿಹಾಯ್ದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ತನಿಖೆ ನಡೆಯುತ್ತಿದೆ. ಆದರೂ, ಬಿಜೆಪಿಯವರು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ರಾಜಕೀಯ ಆಟಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಸಮರ್ಥ ಉತ್ತರ ಕೊಡುತ್ತದೆ ಎಂದರು.
ಸೇಡಿನ ರಾಜಕಾರಣ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ನವರಲ್ಲ. ಈಗಾಗಲೇ ಮುಡಾ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಏನಾದರೂ ಸಲಹೆ, ಸೂಚನೆಗಳು ಇದ್ದಲ್ಲಿ ಪ್ರತಿಪಕ್ಷದವರು ಕೊಡಬಹುದು. ಆದರೆ, ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸೈಟ್ ವಾಪಸ್ ವಿಚಾರವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ ಮೊದಲು ರಾಜೀನಾಮೆ ಕೊಡಲಿ. ನಂತರವಷ್ಟೇ ಉಳಿದವರ ರಾಜೀನಾಮೆ ಬಗ್ಗೆ ಮಾತನಾಡೋಣ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪಾಕಿಸ್ತಾನದವರು ಅಕ್ರಮವಾಗಿ ನೆಲೆಸಿದ್ದನ್ನು ಪತ್ತೆ ಹಚ್ಚಿ ಬಂಧಿಸಿರುವುದು ಕರ್ನಾಟಕದ ಪೋಲಿಸರು. ಆದರೆ, ಕೇಂದ್ರದ ಗುಪ್ತಚರ ಇಲಾಖೆ, ಸಿಬಿಐ ಸೇರಿದಂತೆ ಎಲ್ಲ ಏಜೆನ್ಸಿಗಳು ದೇಶದಲ್ಲಿ ಪಾಕಿಸ್ತಾನದವರ ಇರುವಿಕೆ ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.
ಜಾತಿ ಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ ನಂತರವಷ್ಟೇ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು. ಪಿಎಸ್ಐ ಅಭ್ಯರ್ಥಿಗಳ ವಿವಾದ ನ್ಯಾಯಾಲಯದಲ್ಲಿದೆ. ಸಧ್ಯಕ್ಕೆ ಅದು ಕಗ್ಗಂಟಾಗಿದ್ದು, ಶೀಘ್ರ ಪರಿಹಾರವಾಗಲಿದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಅವರ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯತೆ ಇಲ್ಲ. ಜಾರಕಿಹೊಳಿ ಅವರ ಮಗಳು ಸಂಸದೆ. ಮಗಳಿಗೆ ಕ್ವಾಟರ್ಸ್ ಬೇಕೆಂಬ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿದ್ದರು. ಜಮ್ಮು-ಕಾಶ್ಮೀರ ಚುನಾವಣೆ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಸಿದು ಬಿದ್ದಿದ್ದರು. ಹೀಗಾಗಿ, ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಮೇಲ್ಸೇತುವೆ ಅವಘಡದಲ್ಲಿ ಎಎಸ್ಐ ಅಧಿಕಾರಿ ಸಾವಿನ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಳ್ಳುವೆ ಎಂದರು.