ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕಸರತ್ತು

Published on

ಮಂಗಳೂರು: ಸಿಎಂ ಸಿದ್ಧರಾಮಯ್ಯ ಅವರ ಮೇಲೆ ವಿನಾ ಕಾರಣ ಆರೋಪ ಮಾಡುವ ಮೂಲಕ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಸರತ್ತು ನಡೆಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.
 ಕಾಂಗ್ರೆಸ್ ಕಚೇರಿಯಲ್ಲಿ  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷವಾದ ಬಿಜೆಪಿ ತನ್ನ ಜವಾಬ್ದಾರಿ ಮರೆತು ವಿಧಾನ ಸಭೆ, ವಿಧಾನ ಪರಿಷತ್ ಅಧಿವೇಶನಕ್ಕೆ ಅಡ್ಡಿಪಡಿಸಿತು. ಮುಖ್ಯಮಂತ್ರಿಗೆ ಉತ್ತರಿಸಲು ಅವಕಾಶ ನೀಡಿಲ್ಲ. ರಾಜ್ಯ ಬಿಜೆಪಿಯವರು ಮೈಸೂರಿಗೆ ಪಾದಯಾತ್ರೆ ಮಾಡುವ ಬದಲು ನಿಜವಾಗಿಯೂ ಜನರ ಮೇಲೆ ಕಾಳಜಿಯಿದ್ದರೆ ಜ್ವಲಂತ ಸಮಸ್ಯೆಗಳಾದ ಬೆಲೆಯೇರಿಕೆ, ಕೇಂದ್ರದ ಅನುದಾನ ತಾರತಮ್ಯದ ಬಗ್ಗೆ ದಿಲ್ಲಿಗೆ ಪಾದಯಾತ್ರೆ ತೆರಳಲಿ. ಪ್ರತಿಪಕ್ಷ, ಆಡಳಿತದಲ್ಲಿ  ಹೇಗಿರಬೇಕೆಂದು ಬಿಜೆಪಿಯವರು ಅಟಲ್ ಬಿಹಾರಿ ವಾಜಪೇಯಿವರಂತಹ ವ್ಯಕ್ತಿತ್ವದಿದ ತಿಳಿದುಕೊಳ್ಳಲಿ. ವಾಜಪೇಯಿ, ನೆಹರು, ಇಂದಿರಾ ಅವರು ಯಾವತ್ತೂ ಬಲಿಷ್ಠ ಪ್ರತಿಪಕ್ಷವನ್ನು ಬಯಸುತ್ತಿದ್ದರು. ಆದರೆ ಕಳೆದ 15ವರ್ಷಗಳಿಂದ ದೇಶದಲ್ಲಿ ಪ್ರತಿಪಕ್ಷವನ್ನೇ ನಾಶ ಮಾಡುವ ಹುನ್ನಾರದೊಂದಿಗೆ ಪ್ರಜಾಪ್ರಭುತ್ವ ಕಗ್ಗೊಲೆ ಯತ್ನಿಸಲಾಗುತ್ತಿದೆ ಎಂದರು.
 ರಾಜಕಾರಣದಲ್ಲಿ  ಜಾತಿ, ಧರ್ಮವನ್ನು  ಬೆರೆಸಬಾರದು. ದೇಶದ ಪ್ರಧಾನಿ ಮೋದಿ ಜಾತಿ, ಧರ್ಮ ಲೆಕ್ಕಾಚಾರದಲ್ಲಿ  ದೇಶವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಬಾಂಧವ್ಯ ಹೆಚ್ಚು ಸಮಯ ಬಾಳಲ್ಲ ಎನ್ನುವುದು ಆ ರಾಜಕೀಯ ಪಕ್ಷಗಳ ಮುಖಂಡರ ಮಾತಿನಲ್ಲಿರುವ ಸತ್ಯ. ಜಿಲ್ಲೆಯ ಶಾಸಕರೊಬ್ಬರು, ಮಾಜಿ ಸಂಸದರೊಬ್ಬರು ರೌಡಿ, ಕ್ರಿಮಿನಲ್ ಪುನೀತ್ ಕೆರೆಹಳ್ಳಿಗೆ ಭೇಟಿಯಾಗಿ ಸ್ವಾಗತಿಸಿರುವುದು ನಿಜಕ್ಕೂ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.
 ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್. ಮುಹಮ್ಮದ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಅಶ್ರಫ್ ಕೆ., ಹರಿನಾಥ್, ಮಹಾಬಲ ಮಾರ್ಲ, ನವೀನ್ ಡಿಸೋಜಾ, ಸುಭಾಷ್ ಕೊಲ್ನಾಡ್, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್‌ಬಾಗ್, ವಿಕಾಶ್ ಶೆಟ್ಟಿ, ಲಾರೆನ್ಸ್ ಡಿಸೋಜಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net