ಭ್ರಷ್ಟಾಚಾರದ ಪಿತಾಮಹರೇ ಬಿಜೆಪಿಯವರು

B S Suresh
Published on

ಮೈಸೂರು: ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹರೇ ಬಿಜೆಪಿಯವರು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಕಿಡಿಕಾರಿದರು.

‘ಸಿಎಂ ಮತ್ತು ಡಿಸಿಎಂ ಹಣ ವಸೂಲಿ ಮಾಡುತ್ತಿದ್ದಾರೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೂ ಕೆಲವು ಸತ್ಯ ಹೇಳುತ್ತೇನೆ. ದೇಶದಲ್ಲಿ ಭ್ರಷ್ಟಾಚಾರ ಪಿತಾಮಹರು ಬಿಜೆಪಿಯವರು. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಬಿಜೆಪಿ. ಅವರು ಭ್ರಷ್ಟಾಚಾರ ಮಾಡಿ ಈಗ ಅದನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂಬುದಾಗಿ ಇಡೀ ರಾಜ್ಯದ ಜನರೇ ಹೇಳುತ್ತಿದ್ದಾರೆ. ಹೀಗಾಗಿ, ಬಿಜೆಪಿ ಮಾತಿಗೆ ಬೆಲೆ ಇಲ್ಲ ಎಂದು ತಿರುಗೇಟು ಕೊಟ್ಟರು.
ಸಿಎಂ ಸ್ಥಾನದ ವಿವಾದಕ್ಕೆ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡ ಸಚಿವರು, ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ. ರಾಜಕಾರಣ ಬಿಟ್ಟು ಬೇರೆ ಪ್ರಶ್ನೆಗೆ ಬೇಕಾದರೆ ಉತ್ತರಿಸುತ್ತೇನೆ ಎಂದು ಹೇಳಿ ಸ್ಥಳದಿಂದ ನಿರ್ಗಮಿಸಿದರು.

ಈವರೆಗೂ ಟೆಂಡರ್ ಪ್ರಕ್ರಿಯೆಯೇ ಆಗಿಲ್ಲ

ಈವರೆಗೂ ನಾವು ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ಹೀಗಾಗಿ, ಟೆಂಡರ್ ಕೊಡಿಸುವ ಪ್ರಶ್ನೆಯೇ ಬರಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಟೆಂಡರ್ ವಿಚಾರಕ್ಕೆ ಗುತ್ತಿಗೆದಾರರು ನನ್ನ ವಿರುದ್ಧ ಪ್ರತಿಭಟಿಸಿರುವುದು ಗಮನಕ್ಕೆ ಬಂದಿಲ್ಲ. ಗುತ್ತಿಗೆದಾರರು ನೇರವಾಗಿ ನನ್ನ ಹೆಸರು ಹೇಳಿದ್ದಾರೆಯೇ, ಗುತ್ತಿಗೆ ವಿಚಾರಕ್ಕೂ ನನಗೂ ಏನು ಸಂಬಂಧ ಎಂದು ಕಿಡಿಕಾರಿದರು.


ಕಾಮಗಾರಿಗಳನ್ನು ಇ-ಟೆಂಡರ್ ಮೂಲಕ ನೀಡಲಾಗುತ್ತದೆ. ಇದು ಪಾರದರ್ಶಕ ಪ್ರಕ್ರಿಯೆ. ಅದರಲ್ಲಿ ನಮ್ಮವರನ್ನು ಹೇಗೆ ಸೇರಿಸಲು ಸಾಧ್ಯ? ಮಂತ್ರಿಯಾಗಿ ನಾನು ನಾಲ್ಕು ತಿಂಗಳಾಗಿವೆ. ಇಲ್ಲಿಯವರೆಗೂ ನಾವಿನ್ನೂ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ನೂರು ರೂಪಾಯಿ ಮೊತ್ತದ ಟೆಂಡರ್ ಸಹ ಯಾರಿಗೂ ಕೊಡಿಸಿಲ್ಲ. ಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಗವಹಿಸಿದವರಲ್ಲಿ ಹೆಚ್ಚು ಕೋಟ್ ಮಾಡಿದವರಿಗೆ ಟೆಂಡರ್ ಸಿಗುತ್ತದೆ. ಆರ್ಥಿಕ ಸಾಮರ್ಥ್ಯ ಇರುವವರು ಪಡೆದುಕೊಳ್ಳುತ್ತಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಖಾರವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net